ಬಳ್ಳಾರಿ: ಈ ಬಾರಿ ಗಡಿನಾಡು ಬಳ್ಳಾರಿ ಜಿಲ್ಲೆಯಲ್ಲಿ ದಾಖಲೆ ಮಟ್ಟದಲ್ಲಿ( 42 ಡಿಗ್ರಿ ಸೆಲ್ಸಿಯಸ್ )ಉಷ್ಣಾಂಶ ಏರಿಕೆಯಾಗಿದೆ. ಬಿಸಿಲ ಬೇಗೆ ದಿನೇ ದಿನೆ ಹೆಚ್ಚುತ್ತಿದೆ. ಬೇಸಿಗೆ ಜನರನ್ನ ಮಾತ್ರವಲ್ಲ ಪ್ರಾಣಿಗಳಿಗೂ ಸಂಕಷ್ಟ ತಂದೊಡ್ಡಿದೆ. ಹೀಗಾಗಿ ಬಳ್ಳಾರಿ ಪೊಲೀಸ್ ಇಲಾಖೆ ತಾಪಮಾನ ಹೆಚ್ಚಾಗುತ್ತಿದ್ದಂತೆ ಇಲಾಖೆಯ ಶ್ವಾನಗಳಿಗೆ ವಿಶೇಷ ವ್ಯವಸ್ಥೆ ಮಾಡಿದೆ.
ಬಳ್ಳಾರಿಯ ಡಿಎಆರ್ ಮೈದಾನದ ಕೊಠಡಿಯಲ್ಲಿರುವ ವಿದೇಶಿ ತಳಿಯ ನಾಯಿಗಳಿಗೆ ರಾಯಲ್ ಟ್ರೀಟ್ಮೆಂಟ್ ನೀಡಲಾಗುತ್ತಿದೆ. ಪೊಲೀಸ್ ಇಲಾಖೆಯಲ್ಲಿ ಇರುವ ಕೆನಡಾ, ಜರ್ಮನ್ ಮೂಲದ ತಳಿಯ 6ಕ್ಕೂ ಹೆಚ್ಚು ಶ್ವಾನ ಕೊಠಡಿಯಲ್ಲಿ ಕೂಲರ್, ಫ್ಯಾನ್, ಎಕ್ಸಿಟ್ ಫ್ಯಾನ್ ಅಳವಡಿಸಲಾಗಿದೆ. ಪೊಲೀಸ್ ಇಲಾಖೆಯಲ್ಲಿ ಪೊಲೀಸರ ಕರ್ತವ್ಯದ ಜತೆ ಕೈ ಜೋಡಿಸಿ ಕೆಲಸ ಮಾಡುವ ಶ್ವಾನಗಳಿಗೆ ಬೇಸಿಗೆ ಬಿಸಿಲಿನ ತಾಪ ತಟ್ಟದಂತೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಎಳನೀರು ವ್ಯವಸ್ಥೆ: ಅಲ್ಲದೇ ಇಲ್ಲಿಯ ನಾಯಿಗಳಿಗೆ ಪ್ರತಿದಿನ ಎಳನೀರು ವ್ಯವಸ್ಥೆ ಮಾಡಲಾಗಿದೆ. ಜತೆಗೆ ದ್ರವ ಪದಾರ್ಥಗಳಾದ ಗ್ಲೂಕಾನ್ ಡಿ ಹಾಗೂ ಶಕ್ತಿವರ್ಧಕ ಪೇಯಗಳನ್ನು ನೀಡಲಾಗುತ್ತಿದೆ. ಜತೆಗೆ ರಾಗಿ ಮಾಲ್ಟ್ ಸೇರಿದಂತೆ ಇನ್ನಿತರ ದ್ರವರೂಪದ ಪದಾರ್ಥಗಳನ್ನ ಕೊಡಲಾಗುತ್ತಿದೆ.
ಬಳ್ಳಾರಿಯಲ್ಲಿ ನಿತ್ಯ ಸರಾಸರಿ 42 ಡಿಗ್ರಿ ಉಷ್ಣಾಂಶವಿದೆ. ಮುಂದಿನ ದಿನಗಳಲ್ಲಿ ತಾಪಮಾನ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಈ ಕಾರಣಕ್ಕೆ ಬಳ್ಳಾರಿ ಜನತೆ ಬಿಸಿಲಿನ ಹೊಡೆತಕ್ಕೆ ತತ್ತರಿಸಿದ್ದಾರೆ. ನಮಗೆ ಬೆವರಿನ ಮೂಲಕ ತಾಪಮಾನ ಕಡಿಮೆಯಾಗುತ್ತದೆ. ಆದರೆ, ನಾಯಿಗಳು ಬಾಯಿ ಮೂಲಕ ತಾಪಮಾನವನ್ನು ಕಡಿಮೆ ಮಾಡಿಕೊಳ್ಳಬೇಕು. ಈ ಕಾರಣಕ್ಕೆ ಬೇಸಿಗೆ ಕಾಲದಲ್ಲಿ ಪೊಲೀಸ್ ವಿದೇಶಿ ತಳಿಯ ನಾಯಿಗಳಿಗೆ ಕೂಲರ್, ತಣ್ಣೀರಿನ ಸ್ನಾನ ಮಾಡಿಸುವ ಮೂಲಕ ವಿಶೇಷ ಆರೈಕೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅದಾವತ್ ಹೇಳಿದರು.
ಇದನ್ನೂ ಓದಿ: ಪೋಷಕರು ಗದರಿದರೆಂದು ಬಳ್ಳಾರಿಯಲ್ಲಿ ಮನೆ ಬಿಟ್ಟ ಮಕ್ಕಳು ಬೆಂಗಳೂರಿನಲ್ಲಿ ಪತ್ತೆ