ಹೊಸಪೇಟೆ : ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ಉತ್ಸವಕ್ಕೆ ಗಜಶಾಲೆ ಮತ್ತು ಒಂಟಿ ಮಂಟಪದಲ್ಲಿ ವೇದಿಕೆ ಸಜ್ಜುಗೊಳ್ಳುತ್ತಿದೆ ಎಂದು ವಾರ್ತಾ ಇಲಾಖೆ ತಾಂತ್ರಿಕ ವಿಭಾಗದ ಅಧಿಕಾರಿ ರವೀಂದ್ರ ತಿಳಿಸಿದರು.
ಹೊಸಪೇಟೆ ತಾಲೂಕಿನ ಭವ್ಯ ಪರಂಪರೆಯನ್ನು ಮೆರೆಯುವ ಹಂಪಿ ಉತ್ಸವಕ್ಕೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ನೇತೃತ್ವದಲ್ಲಿ ಹಂಪಿಯ ಗಜಶಾಲೆ ಹಾಗೂ ಒಂಟಿ ಸಾಲಿನ ಮಂಟಪದಲ್ಲಿ ವೇದಿಕೆ ಸಿದ್ಧಗೊಳ್ಳುತ್ತಿದೆ. ಈ ವೇದಿಕೆಯಲ್ಲಿ ಧ್ವನಿ ಮತ್ತು ಬೆಳಕು ಮೂಲಕ ವಿಜಯ ನಗರದ ಗತ ವೈಭವನ್ನು ಸಾರುವಂತೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಜನವರಿ 10 ರಿಂದ ಪ್ರಾರಂಭವಾಗಿ 16 ನೇ ತಾರೀಖಿನ ತನಕ ಪ್ರತಿದಿನ ರಾತ್ರಿ 7 ರಿಂದ 9 ಗಂಟೆಯವರೆಗೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಸಲಾಗುತ್ತದೆ. ಹಂಪಿಯ ಕೆಲ ಸ್ಮಾರಕಗಳ ವಿದ್ಯುತ್‌ಚಾಲಿತ ಯಂತ್ರದ ಮೂಲಕ ಕಂಗೊಳಿಸಲಿದೆ. ಈ ವೇದಿಕೆಯಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲಾಗಿದೆ. ಕಲಾವಿದರು ತಮ್ಮ ಕಲಾ ತಂಡದೊಂದಿಗೆ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ವಿಜಯನಗರಕಾಲದ ಗತವೈಭವ ಮತ್ತೆ ನೆನಪು ಮಾಡುವಂತೆ ಕಾರ್ಯಕ್ರಮ ನಡೆಸಿಕೊಡಲಾಗುತ್ತದೆ ಎಂದರು.