ವಿಜಯನಗರ/ಹುಬ್ಬಳ್ಳಿ: ದ್ವಿತೀಯ ಪಿಯುಸಿ 2021-22ನೇ ಸಾಲಿನ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ವಿಜಯನಗರ ಜಿಲ್ಲೆಯ ಕೊಟ್ಟೂರಿನ 'ಇಂದು' ಪಿಯು ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಶ್ವೇತಾ ಭೀಮಾಶಂಕರ ಭೈರಗೊಂಡ, ಸಹನಾ ಮಡಿವಾಳರ ಈ ಇಬ್ಬರೂ ವಿದ್ಯಾಥಿಗಳು 600 ಅಂಕಗಳಿಗೆ 594 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೊದಲ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ಇದೇ ಕಾಲೇಜಿನ ಜಿ ಮೌನೇಶ್ 593, ಸಮೀರ್ 591, ಶಾಂತಾ ಜಿ 591, ಕಾವೇರಿ ಜಗ್ಗಲ್ 591 ಅಂಕಗಳನ್ನು ಪಡೆದಿದ್ದಾರೆ. ಕೊಟ್ಟೂರಿನ ಇಂದು ಪಿಯು ಕಾಲೇಜು ಕಲಾ ವಿಭಾಗದಲ್ಲಿ ಸತತ 5 ವರ್ಷಗಳಿಂದ ರಾಜ್ಯಕ್ಕೆ ಮೊದಲ ಸ್ಥಾನ ಪಡೆಯುತ್ತ ಬಂದಿರುವುದು ಗಮನಾರ್ಹ. ಈ ಬಾರಿಯೂ ಕೂಡ ಕಲಾ ವಿಭಾಗದಲ್ಲಿ ಇಂದು ಕಾಲೇಜ್ ಟಾಪರ್ ಆಗಿದೆ.
ಇನ್ನು ಹುಬ್ಬಳ್ಳಿಯ ಎಸ್.ಜೆ.ಎಂ.ವಿ.ಎಸ್ ಕಾಲೇಜಿನ ವಿದ್ಯಾರ್ಥಿನಿ ಸಾನಿಕಾ ಗುಂಡೂರಾವ್ ರಾಜ್ಯಕ್ಕೆ ತೃತೀಯ ರ್ಯಾಂಕ್ ಪಡೆದಿದ್ದಾರೆ. ಸಾನಿಕಾ 600 ಅಂಕಕ್ಕೆ 593 ಅಂಕಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿನಿಯರ ಸಾಧನೆಗೆ ಕಾಲೇಜು ಹಾಗೂ ಕುಟುಂಬಸ್ಥರಲ್ಲಿ ಸಂತೋಷ ಮನೆ ಮಾಡಿದೆ.
(ಇದನ್ನೂ ಓದಿ: ಪಿಯು ಫಲಿತಾಂಶ ಪ್ರಕಟ: ಗಣಿತದಲ್ಲಿ14 ಸಾವಿರ ವಿದ್ಯಾರ್ಥಿಗಳಿಂದ ಶತಕ ಸಾಧನೆ, ಈ ಬಾರಿ ಶೂನ್ಯ ಫಲಿತಾಂಶಕ್ಕೆ ಬ್ರೇಕ್)