ಬಳ್ಳಾರಿ: ಈಗಾಗಲೇ ರಾಜ್ಯದ ಆಯ್ದ ಜಿಲ್ಲೆಗಳಲ್ಲಿ ಲಾಕ್ಡೌನ್ ಆದೇಶ ಜಾರಿಯಲ್ಲಿದೆ. ಆ ಜಿಲ್ಲೆಗಳಲ್ಲಾದ ವ್ಯತ್ಯಾಸ ಹಾಗೂ ಕೋವಿಡ್ ನಿಯಂತ್ರಣದ ಫಲಿತಾಂಶದ ವರದಿಯನ್ನಾಧರಿಸಿ ಬಳ್ಳಾರಿ ಜಿಲ್ಲೆಯ ಲಾಕ್ಡೌನ್ಗೆ ಚಿಂತನೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಕಚೇರಿಯ ನಜೀರ್ ಸಭಾಂಗಣದಲ್ಲಿಂದು ಕೋವಿಡ್ ನಿಯಂತ್ರಣದ ಪೂರ್ವಭಾವಿ ಸಭೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಹದಿನೈದು ದಿನಗಳ ಕಾಲ ಕೋವಿಡ್ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ಒದಗಿಸುವ ಸಾಮರ್ಥ್ಯ ನಮ್ಮಲ್ಲಿದೆ. ಹೀಗಾಗಿ, ಅನ್ಯ ಜಿಲ್ಲೆಗಳಲ್ಲಾದ ಲಾಕ್ಡೌನ್ ಕುರಿತು ಪೂರ್ವಾಪರ ಪರಿಶೀಲನೆ ನಡೆಸಿ, ನಮ್ಮ ಜಿಲ್ಲೆಯಲ್ಲಿ ಲಾಕ್ಡೌನ್ ಮಾಡಬೇಕೋ, ಬೇಡವೋ ಎಂಬುದರ ಕುರಿತು ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದರು.
ಮುಂದಿನ ಏಳು ದಿನಗಳವರೆಗೆ ಕಾದುನೋಡಿ: ನಾನಂತೂ ಜನರ ಆರೋಗ್ಯ ವಿಚಾರದಲ್ಲಿ ರಾಜಿಯಾಗಿಲ್ಲ. ನಮ್ಮ ಸರ್ಕಾರ ಕೂಡ ಇಂಥದ್ದೇ ನಿಲುವನ್ನು ಹೊಂದಿದೆ. ಮುಂದಿನ ಏಳು ದಿನಗಳವರೆಗೆ ಕಾದುನೋಡಿ. ಆ ಮೇಲೆ ನಾನೇನು ಮಾಡ್ತೀನಿ ಅಂತ ಬಹಿರಂಗವಾಗಿ ಹೇಳೋಲ್ಲ. ಮಾಡಿ ತೋರಿಸುವೆ ಎಂದರು.
ಜಿಂದಾಲ್ನಲ್ಲಿ ಸೋಂಕಿತರ ಸಂಖ್ಯೆ ಇಳಿಮುಖ: ಜಿಂದಾಲ್ ಸಮೂಹ ಸಂಸ್ಥೆಯಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಈ ಹಿಂದೆ 10 ಸಾವಿರ ಆ್ಯಂಟಿಜೆನ್ ಕಿಟ್ಗಳನ್ನು ಖರೀದಿಸಲಾಗಿತ್ತು. ಅದರಲ್ಲಿ 5,000 ಜಿಂದಾಲ್ಗೆ, 5,000 ಜಿಲ್ಲಾಡಳಿತಕ್ಕೆ ಹಂಚಿಕೆ ಮಾಡಲಾಗಿತ್ತು. ಈಗ ಕೂಡ ಹೊಸದಾಗಿ 10 ಸಾವಿರ ಆ್ಯಂಟಿಜೆನ್ ಕಿಟ್ಗಳನ್ನು ಖರೀದಿಸಲು ಜಿಲ್ಲಾಡಳಿತಕ್ಕೆ ಇಂಡೆಂಟ್ ನೀಡಲಾಗಿದೆ. ಪ್ರತಿದಿನ 1,200 ಮಂದಿಗೆ ಆ್ಯಂಟಿಜೆನ್ ಕಿಟ್ಗಳಿಂದ ಪರೀಕ್ಷೆ ಮಾಡಲಾಗುತ್ತೆ ಎಂದರು.
ಇನ್ನು, ಅಂತಾರಾಜ್ಯ ಗಡಿಭಾಗದ ಹಳ್ಳಿಗಳಿಗೆ ಗಣಿಜಿಲ್ಲೆಯಿಂದ ಹೋಗುವ ಹಾಗೂ ಬರುವ ಬಸ್ಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗುವುದು. ಜಿಲ್ಲಾ ಪೊಲೀಸ್ ಇಲಾಖೆ ಕೂಡ ಅಂತಾರಾಜ್ಯ ಗಡಿಕಾಯುವ ಕಾಯಕವನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಎಸ್ಪಿ ಸಿ.ಕೆ. ಬಾಬಾ ಅವರಿಗೆ ಸೂಚನೆ ನೀಡಿದರು.