ಬಳ್ಳಾರಿ: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಹೋಬಳಿ ಬಳಿ ನಡೆಯುತ್ತಿರುವ ಕಲ್ಲು ಕ್ವಾರಿ ಗಣಿಗಾರಿಕೆ ಕಾನೂನು ಬಾಹಿರವಾಗಿದ್ದು, ಕೂಡಲೇ ಅದಕ್ಕೆ ತಾತ್ಕಾಲಿಕ ತಡೆ ನೀಡಬೇಕೆಂದು ಜಿಲ್ಲಾಧಿಕಾರಿ ಎಸ್. ಎಸ್ ನಕುಲ್ ಖಡಕ್ ಸೂಚನೆ ನೀಡಿದ್ದಾರೆ.
ಹರಪನಹಳ್ಳಿ ತಾಲೂಕಿನ ಬೇವಿನಹಳ್ಳಿ ಗ್ರಾಮಕ್ಕೆ ಜಿಲ್ಲಾಧಿಕಾರಿ ನಿನ್ನೆ ದಿಢೀರ್ ಭೇಟಿ ನೀಡಿದರು. ಈ ವೇಳೆ, ಕಲ್ಲು ಕ್ವಾರಿಯ ಕಾರ್ಮಿಕರು ಹಾಗೂ ಮಾಲೀಕರು ಮನವಿ ಪತ್ರ ಸಲ್ಲಿಸಿದರು. ನಂತರ ಮಾತನಾಡಿದ ಡಿಸಿ, ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಕುಟುಂಬಗಳು ಹೆಚ್ಚಿವೆ. ಪಾರಂಪರಿಕ ಕಲ್ಲು ಒಡೆಯುವ ಕಾರ್ಮಿಕರು ಗಣಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿದಲ್ಲಿ 15 ದಿನಗೊಳಗಾಗಿ ಅನುಮತಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಆದರೆ, ಈ ಪರಂಪರೆ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ದೂರುಗಳ ದಾಖಲಾಗಿವೆ. ಅಗತ್ಯ ಪ್ರಮಾಣಕ್ಕಿಂತ ಅಧಿಕ ಗಣಿಗಾರಿಕೆ ನಡೆಸುತ್ತಿರುವವರು ಅಗತ್ಯ ದಾಖಲೆಗಳನ್ನು ಒದಗಿಸಿ ಪರವಾನಗಿ ಪಡೆದುಕೊಳ್ಳಬೇಕು ಎಂದು ತಾಕೀತು ಮಾಡಿದ್ದಾರೆ.
ಇದಕ್ಕೂ ಮುನ್ನ ಉಚ್ಚಂಗಿದುರ್ಗ, ಹಿರೇಮೆಗಳಗೆರೆ, ಚಟ್ನಿಹಳ್ಳಿ, ಸತ್ತೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ನೂರಾರು ಕಲ್ಲು ಒಡೆಯುವ ಕಾರ್ಮಿಕರು ರಸ್ತೆಗೆ ಇಳಿದು ಕಲ್ಲು ಕ್ವಾರಿ ಪರವಾನಗಿ ನಿಯಮಗಳನ್ನು ಸಡಿಲೀಕರಿಸಿ ಸಹಕರಿಸಬೇಕು ಎಂದು ಆಗ್ರಹಿಸಿದ್ರು. ತಹಶೀಲ್ದಾರ್ ನಾಗವೇಣಿ ಅವರಿಗೆ ಘೇರಾವ್ ಹಾಕಿ, ಅಧಿಕಾರಿಗಳ ಧೋರಣೆ ವಿರುದ್ಧ ಘೋಷಣೆ ಕೂಗಿದರು.
1972 ರಿಂದಲೂ ಕಲ್ಲು ಬಂಡೆಗಳನ್ನು ಒಡೆದು ಜೀವನ ಸಾಗಿಸುತ್ತಿದ್ದೇವೆ. ಅದೇ ಪರಂಪರೆಯಿಂದ ಶಿಕ್ಷಣವನ್ನು ಪಡೆಯದೇ ಕಲ್ಲು ಕ್ವಾರಿಯಲ್ಲಿಯೇ ಜೀವನ ಸಾಗಿಸುತ್ತಿದ್ದೇವೆ. ಹರಪನಹಳ್ಳಿ ತಾಲೂಕನ್ನು ದಾವಣಗೆರೆ ಜಿಲ್ಲೆಯಿಂದ ಬೇರ್ಪಡಿಸಿ, ಬಳ್ಳಾರಿಗೆ ಸೇರಿಸಿದ್ದಾಗಿನಿಂದಲೂ ಅಧಿಕಾರಿಗಳು ಕುಂಟು ನೆಪವೊಡ್ಡಿ ಅನಗತ್ಯವಾಗಿ ಕೆಲಸಕ್ಕೆ ಅಡ್ಡಿ ಪಡಿಸುತ್ತಿದ್ದಾರೆ. ಪರವಾನಗಿಗಾಗಿ 250 ಕಿ.ಮೀ ದೂರದ ಬಳ್ಳಾರಿಗೆ ಅಲೆದು ಸಾಕಾಗಿದೆ. ಕೈಗಳಿಗೆ ಕೆಲಸ ಇಲ್ಲದೆ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈಗಿರುವ ಕಾನೂನು ನಿಯಮಗಳನ್ನು ಸಡಿಲಿಸಿ ಅಧಿಕಾರಿಗಳು ಸ್ಥಳದಲ್ಲಿಯೇ ಪರವಾನಗಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ರು.
ತೆರಿಗೆ ವಂಚನೆ ಪ್ರಕರಣ ಆರೋಪದಡಿ ಇಲಾಖೆಯಿಂದ ಸಿ.ಫಾರಂ ಪಡೆದುಕೊಂಡಿದ್ದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಇದಕ್ಕೂ ಮುಂಚೆಯೇ ಈ ಕ್ರಷರ್ಗಳ ಮೇಲೆ ದೂರು ದಾಖಲಾಗಿತ್ತು. ಅಧಿಕಾರಿಗಳು ದೂರು ಹಿಂಪಡೆದು ದಾಖಲೆಗಳನ್ನು ಒದಗಿಸಬೇಕು. ಉಚ್ಚಂಗಿದುರ್ಗ ಗ್ರಾಮದ ಸರ್ವೇ ನಂ 399/ಈ, 271 ಜಮೀನಿಗೆ ಸಂಬಂಧಿಸಿದಂತೆ ಸೆಕ್ಷೆನ್ 4 ರಿಂದ 17 ಕ್ಕೆ ರವಾನಗೆ ಆಗಿದೆ. ಕಂದಾಯ ಇಲಾಖೆ, ಅರಣ್ಯ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಗ್ರಾಮ ಸಭೆ ನಡೆಸುವುದರ ಮೂಲಕ ಕಾರ್ಮಿಕರ ಪರ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಕೋರಿದ್ರು.
ಈ ವೇಳೆ, ಉಪ ವಿಭಾಗಾಧಿಕಾರಿ ಪ್ರಸನ್ನ ಕುಮಾರ್, ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಮಹಾವೀರ ಜೈನ್, ಹೊಸಪೇಟೆ ಗಣಿ ಭೂ ವಿಜ್ಞಾನ ಅಧಿಕಾರಿ ಎಸ್.ಎನ್ ಹರ್ಷವರ್ಧನ್, ತಹಶೀಲ್ದಾರ್ ನಾಗವೇಣಿ, ಸಬ್ ಇನ್ಸ್ಪೆಕ್ಟರ್ ವೀರಬಸಪ್ಪ ಕುಶಲಾಪುರ, ಶ್ರೀಧರ್, ಮುಖಂಡರಾದ ಸಿದ್ದಪ್ಪ, ವಿಶ್ವನಾಥ, ಫಣಿಯಾಪುರ ಲಿಂಗರಾಜ ಉಪಸ್ಥಿತರಿದ್ದರು.