ಬಳ್ಳಾರಿ: ಉದ್ದೇಶಿತ ಕೈಗಾರಿಕೆ, ಕಾರ್ಖಾನೆಗಳ ಸ್ಥಾಪನೆ, ನಿರುದ್ಯೋಗ ಭತ್ಯೆ ಮತ್ತು ಭೂ ಪರಿಹಾರ ಹೆಚ್ಚಿಸುವಲ್ಲಿ ವಿಳಂಬ ನೀತಿಯನ್ನ ಅನುಸರಿಸುತ್ತಿರುವ ಹಿನ್ನಲೆ ಜಿಲ್ಲೆಯ ಬಳ್ಳಾರಿ ಮತ್ತು ಕುರುಗೋಡು ತಾಲೂಕಿನ ವಿವಿಧ ಗ್ರಾಮಗಳ ರೈತರು ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿಂದು ನಡೆದ ಸುದ್ದಿಗೋಷ್ಟಿಯಲ್ಲಿ ಕೊಳಗಲ್ಲು ಗ್ರಾಮದ ರೈತ ವಿರುಪಾಕ್ಷಪ್ಪ ಮಾತನಾಡಿ, ಬಳ್ಳಾರಿ ಮತ್ತು ಕುರುಗೋಡು ತಾಲೂಕಿನ ಕುಡುತಿನಿ, ಹರಗಿನಡೋಣಿ, ವೇಣಿ ವೀರಾಪುರ, ಸಿದ್ಧಮ್ಮನಹಳ್ಳಿ, ಕೊಳಗಲ್ಲು ಸೇರಿದಂತೆ ಇತರೆ 12 ಗ್ರಾಮಗಳ ರೈತರು ಈ ಬಾರಿ ನಡೆಯಲಿರುವ ಮತದಾನ ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ಕೆಐಡಿಬಿಯಿಂದ ಬ್ರಹ್ಮಿಣಿ, ಅರ್ಸೆಲರ್ ಮಿತ್ತಲ್ ಹಾಗೂ ಎನ್ಎಂಡಿಸಿ ಕಂಪನಿಗಳು ಸುಮಾರು 10,000 ಎಕರೆಯನ್ನ ವಶಪಡಿಸಿಕೊಂಡಿವೆ. ಅತ್ಯಂತ ಕಡಿಮೆ ದರದಲ್ಲಿ ರೈತರಿಂದ ಭೂಮಿಯನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಚಿವ ತುಕರಾಂ ವಿರುದ್ಧ ಗುಡುಗು:
ವೈದ್ಯಕೀಯ ಶಿಕ್ಷಣ ಸಚಿವ ಈ. ತುಕರಾಂ ಅವರು ಕಳೆದ ಮೂರು ಬಾರಿ ಶಾಸಕರಾಗಿ ಆಯ್ಕೆಯಾದ್ರೂ ಉದ್ದೇಶಿತ ಕೈಗಾರಿಕೆ ಕಂಪನಿಯಿಂದ ಕಾರ್ಖಾನೆಯನ್ನ ಸ್ಥಾಪಿಸಲು ಮುಂದಾಗಿಲ್ಲ. ನಿರುದ್ಯೋಗ ಭತ್ಯೆ ಹಾಗೂ ಭೂ ಪರಿಹಾರ ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಿಐಟಿಯು ಮುಖಂಡ ಜೆ.ಸತ್ಯಬಾಬು ದೂರಿದರು. ಅಲ್ಲದೆ, ಈ ಸಂಬಂಧ ಸಚಿವರನ್ನ ಭೇಟಿಯಾಗಲು ಐದಾರು ಬಾರಿ ಮನೆ ಹಾಗೂ ಕಚೇರಿಗೆ ಬಳಿ ತೆರಳಿದ್ರೂ ಪ್ರಯೋಜನವಾಗಿಲ್ಲ ಎಂದರು.
ಅಲ್ಲದೇ, ಯಾವುದೇ ರೀತಿಯ ಸ್ಪಂದನೆ ಸಚಿವರಿಂದ ದೊರಕುತ್ತಿಲ್ಲ. ಸಚಿವರ ವಿರುದ್ಧವೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದೆಂದು ರೈತರು ಎಚ್ಚರಿಕೆ ರವಾನಿಸಿದ್ದಾರೆ.