ಹೊಸಪೇಟೆ (ವಿಜಯನಗರ) : ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ವಿಜಯನಗರ ಜಿಲ್ಲೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ವಿಜಯನಗರ ಸಾಮ್ರಾಜ್ಯವನ್ನ ಒಂದು ದಿನದಲ್ಲಿ ಕಟ್ಟಿಲ್ಲ. ಅನೇಕರು ಹಲವಾರು ವರ್ಷ ಇದಕ್ಕಾಗಿ ಶ್ರಮ ಪಟ್ಟಿದ್ದಾರೆ. ವಿದ್ಯಾರಣ್ಯರ ಆಶೀರ್ವಾದದಿಂದ ವಿಜಯನಗರ ಸಾಮ್ರಾಜ್ಯದಿಂದ ನಿರ್ಮಾಣವಾಯಿತು ಎಂದರು.
ಇಂದು ಬಿ ಎಸ್ ಯಡಿಯೂರಪ್ಪ ಅವರ ಆಶೀರ್ವಾದದಿಂದ ವಿಜಯನಗರ ಜಿಲ್ಲೆ ರಚನೆ ಆಗಿದೆ. ವಿಜಯನಗರದ ಮಣ್ಣು ಹೋರಾಟದ ಕಿಚ್ಚು ಹಚ್ಚಿದ್ರೆ, ತುಂಗಭದ್ರ ನದಿಯಂದ ಭಕ್ತಿಯ ಸೆಲೆ ಉಕ್ಕುತ್ತದೆ. ಪ್ರಜಾಪ್ರಭುತ್ವದಲ್ಲಿ ವಿಜಯನಗರದ ಗತ ವೈಭವ ಇಂದು ಪುನರ್ ಸ್ಥಾಪನೆಯಾಗಿದೆ ಎಂದು ಹೇಳಿದರು.
ಇಂದಿನಿಂದ ವಿಜಯನಗರದಲ್ಲಿ ಅಭಿವೃದ್ಧಿಯ ಪರ್ವ : ಜಿಲ್ಲೆಗೆ ಸೇರಿದ ಹಳ್ಳಿಯ ಕಟ್ಟ ಕಡೆಯ ಕುಟುಂಬ ನೆಮ್ಮದಿಯಿಂದ ಇರುತ್ತದೆ. ಇದಕ್ಕೆ ಯಡಿಯೂರಪ್ಪನವರ ಆಶೀರ್ವಾದ ಕಾರಣ. ವಿಜಯನಗರ ಜಿಲ್ಲೆಗೆ ಇರುವ ಪರಂಪರೆ ರಾಜ್ಯದಲ್ಲಿ ಯಾವುದೇ ಜಿಲ್ಲೆಗೆ ಇಲ್ಲ. ಮುಂದೆ 643 ಕೋಟಿ ರೂ. ವೆಚ್ಚದಲ್ಲಿ ಈ ಭಾಗದ ಪ್ರವಾಸೋದ್ಯಮವನ್ನ ಅಭಿವೃದ್ದಿಪಡಿಸಲಾಗುವುದು ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ಈ ಯೋಜನೆಗೆ ಹಣ ನೀಡಲಾಗುವುದು. 83 ಎಕರೆ ಜಮೀನಿನಲ್ಲಿ ಜಿಲ್ಲಾಡಳಿತ ಭವನ ಮಾಡಲು ಯಡಿಯೂರಪ್ಪ ಕೊಡುಗೆ ನೀಡಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ಇಂದಿನಿಂದ ವಿಜಯನರದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಲಿದೆ ಎಂದರು.
ಇದನ್ನೂ ಓದಿ: ಇಂದು ವಿಜಯನಗರ ಜಿಲ್ಲೆ ಉದ್ಘಾಟಿಸಲಿರುವ ಸಿಎಂ: ಕಾರ್ಯಕ್ರಮಕ್ಕೆ ವೇದಿಕೆ ಸಜ್ಜು