ಬಳ್ಳಾರಿ: ಕಳೆದ ಎರಡು ತಿಂಗಳಿಂದ ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆ ಭಾರಿ ಪ್ರಚಾರದಲ್ಲಿ ತೊಡಗಿದ್ದ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಇದೀಗ ರಿಲಾಕ್ಸ್ ಮೂಡ್ನಲ್ಲಿದ್ದಾರೆ.
ಬಳ್ಳಾರಿ ನಗರದ ಬಸವೇಶ್ವರ ಬಡಾವಣೆಯಲ್ಲಿರುವ ಅವರ ಮನೆಯಲ್ಲಿ ಕುಟುಂಬಸ್ಥರೊಂದಿಗೆ ನೆಮ್ಮದಿಯಿಂದ ಕಾಲ ಕಳೆಯುತ್ತಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರದ ಶೇ. 80-90ರಷ್ಟು ಪ್ರದೇಶಗಳಿಗೆ ಸ್ವತಃ ಭೇಟಿ ನೀಡಿರುವೆ. ನನ್ನ ಗೆಲವು ಖಚಿತ ಎಂದು ಜನರೇ ಹೇಳ್ತಾರೆ. ಜನರ ಸ್ಪಂದನೆ ನೋಡಿದ್ರೆ ಒಂದು ಲಕ್ಷ ಮತಗಳ ಅಂತರದಿಂದ ಗೆಲವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿಯ ಜನರು ನಮ್ಮವನೇ ಎಂದು ನನ್ನನ್ನು ಆದರರಿಂದ ಕಾಣ್ತಾರೆ. ಹಾಗಾಗಿ ಗೆಲವಿನ ಬಗ್ಗೆ ಅನುಮಾನವಿಲ್ಲ ಎಂದು ಹೇಳಿದರು.
ಮೋದಿಯೊಂದಿಗೆ ಮಾತು:
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಆತ್ಮೀಯವಾಗಿ ಮಾತನಾಡಿದೆ. ಬಳ್ಳಾರಿಯಲ್ಲಿ ಹೇಗಿದೆ ವಾತಾವರಣ ಅಂತ ಕೇಳಿದ್ರು.
ಆಗ ನಾನು, ಬಳ್ಳಾರಿಯಲ್ಲಿ ಜನರ ರೆಸ್ಪಾನ್ಸ್ ಉತ್ತಮವಾಗಿದೆ. ತುಂಗಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿನ ಹೂಳೆತ್ತುವ ಸಲುವಾಗಿ ಅಗತ್ಯ ಅನುದಾನ ಮೀಸಲಿರಿಸಬೇಕು. ಆಗ ಮತದಾರರು ಖಂಡಿತ ನಮ್ಮ ಕೈ ಹಿಡಿತಾರೆ ಎಂದೆ. ಮೋದಿಯವರು ಸಹ ಅದಕ್ಕೆ ಸಮ್ಮತಿಸಿದರು ಎಂದು ನೆನಪಿಸಿಕೊಂಡರು.
ಅದೇ ವೇದಿಕೆಯಲ್ಲಿ ಪ್ರಧಾನಿ ಮೋದಿಯವರು, ಒಂದು ಸಾವಿರ ಕೋಟಿ ರೂ. ಅನುದಾನ ಮೀಸಲಿಸಿರುವುದಾಗಿ ಭರವಸೆ ನೀಡಿದರು ಎಂದರು. ಈ ಎಲ್ಲಾ ಕಾರಣಗಳಿಂದ ನಾನು ಗೆಲ್ಲೋದು ಪಕ್ಕಾ ಎಂದರು.