ಬಳ್ಳಾರಿ : ಜಿಲ್ಲೆಯಿಂದ ಕೂಲಿ ಕೆಲಸಕ್ಕಾಗಿ ಆಂಧ್ರ ಪ್ರದೇಶಕ್ಕೆ ತೆರಳಿರುವ ಕಾರ್ಮಿಕರಿಗೆ ಅಲ್ಲಿನ ಸ್ಥಳೀಯ ಆಡಳಿತ ಆಹಾರ ಸಾಮಾಗ್ರಿ ಕಿಟ್ ನೀಡುತ್ತಿಲ್ಲ. ಇದರಿಂದ ತಮ್ಮನ್ನು ಮರಳಿ ಜಿಲ್ಲೆಗೆ ಕರೆ ತನ್ನಿ ಎಂದು ಸಿರುಗುಪ್ಪ ತಹಶೀಲ್ದಾರರಿಗೆ ಪತ್ರ ಬರೆದಿದ್ದಾರೆ.
ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾವಿಹಾಳು ಗ್ರಾಮದಿಂದ ಪಕ್ಕದ ರಾಜ್ಯ ಆಂಧ್ರ ಪ್ರದೇಶಕ್ಕೆ ಕೂಲಿ ಕೆಲಸಕ್ಕಾಗಿ ತೆರಳಿದ ಕಾರ್ಮಿಕರಿಗೆ ಕನ್ನಡದವರೆಂಬ ಕಾರಣಕ್ಕೆ ರೇಷನ್ ಕಿಟ್ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಸುಮಾರು 70 ಕೂಲಿ ಕಾರ್ಮಿಕರಲ್ಲಿ ಗರ್ಭಿಣಿಯರು ಕೂಡಾ ಇದ್ದು, ಅವರಿಗೆ ಅಲ್ಲಿನ ಸ್ಥಳೀಯ ಆಡಳಿತ ನೆರವಾಗುತ್ತಿಲ್ಲ.
ಲಾಕ್ಡೌನ್ನಿಂದಾಗಿ ಆಂಧ್ರದ ಗುಂಟೂರು ಜಿಲ್ಲೆಯ ನರಸಪೇಟೆಯ ಸತ್ಯನಪಲ್ಲಿ ಗ್ರಾಮದಲ್ಲಿ ಲಾಕ್ ಆಗಿರೋ ರಾಜ್ಯದ ಕೂಲಿ ಕಾರ್ಮಿಕರು ನಮ್ಮನ್ನು ಸಮಸ್ಯೆಯಿಂದ ಪಾರು ಮಾಡಿ ಎಂದು ಅಳಲು ತೋಡಿಕೊಂಡಿದ್ದಾರೆ. ಅಲ್ಲದೆ ವಾಪಸ್ ಕರೆ ತರುವಂತೆ ಸಿರುಗುಪ್ಪ ತಹಶೀಲ್ದಾರ್ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.