ಬಳ್ಳಾರಿ: ಮೂರು ಟಿಪ್ಪರ್ ಲಾರಿಗಳ ನಡುವೆ ಅಪಘಾತ ಸಂಭವಿಸಿ, ಚಾಲಕರು ಗಾಯಗೊಂಡ ಘಟನೆ ಸಂಡೂರು- ತೋರಣಗಲ್ ರಸ್ತೆಯಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ಬಳ್ಳಾರಿಯಿಂದ ಸಂಡೂರು ಮಾರ್ಗವಾಗಿ ತೆರಳುತ್ತಿದ್ದ ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಂ ಕೂಡಲೇ ತಮ್ಮ ವಾಹನಗಳನ್ನ ನಿಲ್ಲಿಸಿ ಗಾಯಾಳುಗಳ ನೆರವಿಗೆ ಧಾವಿಸಿದ್ದಾರೆ.
ಲಾರಿಗಳ ನಡುವೆ ಸಿಲುಕಿಕೊಂಡ ಗಾಯಾಳುಗಳನ್ನು ಸಾರ್ವಜನಿಕರ ಸಹಾಯದೊಂದಿಗೆ ಹೊರತೆಗೆದು ಜಿಂದಾಲ್ ಕೈಗಾರಿಕೆ ಸಂಸ್ಥೆಯ ಆಂಬುಲೆನ್ಸ್‌ನಲ್ಲಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂದರ್ಭ ಗವಿಸಿದ್ದೇಶ್ವರ ಸ್ವಾಮೀಜಿ ಹಾಗು ಈ. ತುಕಾರಾಂ ವಿಶೇಷ ಕಾಳಜಿವಹಿಸಿ ಮಾನವೀಯತೆ ಮೆರೆದರು.
ಗಾಯಾಳುಗಳಿಗೆ ಸಚಿವರ ಧನ ಸಹಾಯ
ಅಪಘಾತದಲ್ಲಿ ಗಾಯಗೊಂಡವರ ಸಂಬಂಧಿಕರಿಗೆ ಸಚಿವ ತುಕಾರಾಂ ಧನಸಹಾಯ ಮಾಡಿದರು. ಇದೇ ವೇಳೆ ಖಾಸಗಿ ಸಂಸ್ಥೆಯ ಆಂಬುಲೆನ್ಸ್ ಚಾಲಕನಿಗೂ ಸಚಿವರು ಹಣ ಕೊಟ್ಟರು. ಗಾಯಾಳುಗಳ ಹೆಸರು ತಿಳಿದುಬಂದಿಲ್ಲ. ತೋರಣಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.