ಶಿವಮೊಗ್ಗ: ಮಲೆನಾಡು ಸೇರಿದಂತೆ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಜೇನು ಕೃಷಿ ಮಾಡಲಾಗುತ್ತಿದೆ. ಕೃಷಿಯೊಂದಿಗೆ ಉಪ ಕಸುಬಾಗಿ ಜೇನು ಸಾಕಣೆ ಮಾಡಿ ಸಾಕಷ್ಟು ಆದಾಯ ಗಳಿಸುವ ರೈತರು ಮಲೆನಾಡಿನಲ್ಲಿದ್ದಾರೆ. ಆದರೆ, ಇದೀಗ ಜೇನು ಕೃಷಿಗೆ ವೈರಸ್ ಕಾಟ ಆರಂಭವಾಗಿದ್ದು, ಜೇನು ಕೃಷಿಕರು ನಷ್ಟ ಅನುಭವಿಸಬೇಕಾಗಿದೆ.
ಮಲೆನಾಡಿನಲ್ಲಿ ರೈತರು ತಮ್ಮ ತೋಟಗಳಲ್ಲಿ ಜೇನು ಪೆಟ್ಟಿಗೆಗಳನ್ನಿಟ್ಟು ಜೇನು ಸಾಕಣೆ ಮಾಡುತ್ತಾರೆ. ವಾರ್ಷಿಕವಾಗಿ ಲಕ್ಷಾಂತರ ರೂಪಾಯಿ ಆದಾಯಗಳಿಸುವ ಜೇನು ಕೃಷಿಕರೂ ಮಲೆನಾಡಿನಲ್ಲಿದ್ದಾರೆ. ಇದೀಗ ಜೇನು ಕೃಷಿಗೆ ಥ್ರ್ಯಾಸಾಕ್ ಬ್ರೂಡ್ ವೈರಸ್ ಬಾಧೆ ಆರಂಭಗೊಂಡಿದ್ದು, ರೈತರು ಜೇನು ಕೃಷಿಯನ್ನು ಕೈಬಿಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಜೇನು ತೊಟ್ಟಿಗಳಿಗೆ ವೈರಸ್ ಸೊಂಕಿನಿಂದಾಗಿ ಜೇನು ಕೃಷಿ ನಡೆಸಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ತೋಟಗಳ ನಡುವೆ ಇಟ್ಟಿರುವ ಜೇನು ತೊಟ್ಟಿಗಳಲ್ಲಿ ಜೇನು ಗೂಡನ್ನೇನೋ ಕಟ್ಟುತ್ತಿವೆ. ಆದರೆ, ಜೇನು ತುಪ್ಪಾ ಉತ್ಪಾದನೆಯಾಗಬೇಕು ಎಂಬ ಹಂತದಲ್ಲಿ ಜೇನು ತೊಟ್ಟಿಯಲ್ಲಿ ಥ್ರ್ಯಾಸಾಕ್ ಬ್ರೂಡ್ ವೈರಸ್ ಕಾಣಿಸಿಕೊಳ್ಳುತ್ತಿದೆ. ವೈರಸ್ ಬಂತೆಂದರೆ ಸಾಕು, ಯಾವುದೇ ಕಾರಣಕ್ಕೂ ಜೇನು ತುಪ್ಪ ಉತ್ಪಾದನೆಯಾಗುವುದೇ ಇಲ್ಲ. ಜೇನು ತೊಟ್ಟಿಗಳನ್ನು ತಮಿಳುನಾಡು ಹಾಗೂ ಕೇರಳ ರಾಜ್ಯದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಈ ರಾಜ್ಯಗಳಿಂದಲೇ ಮಲೆನಾಡಿಗೆ ವೈರಸ್ ಬಂದಿದೆ ಎಂದು ಹೇಳಲಾಗುತ್ತಿದೆ. ಈ ವೈರಸ್ನಿಂದಾಗಿ ಜೇನು ತುಪ್ಪ ಉತ್ಪಾದನೆಯೇ ಸಾಧ್ಯವಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಜೇನು ಕೃಷಿ ರೈತರ ಆದಾಯದ ಒಂದು ಭಾಗವೇ ಆಗಿತ್ತು. ಆದರೆ, ಇದೀಗ ಜೇನು ಕೃಷಿಗೂ ವೈರಸ್ ಹಾವಳಿ ಆರಂಭಗೊಂಡಿದೆ. ಕೂಡಲೇ ಈ ವೈರಸ್ ನಿಯಂತ್ರಣಕ್ಕೆ ವಿಜ್ಞಾನಿಗಳು ಮುಂದಾಗಬೇಕಿದೆ. ಇಲ್ಲದಿದ್ದಲ್ಲಿ ರೈತರು ಜೇನು ಕೃಷಿಯಿಂದ ವಿಮುಖರಾಗುವುದರಲ್ಲಿ ಯಾವುದೇ ಅನುಮಾನವೇ ಇಲ್ಲ.