ಬೆಳಗಾವಿ : ಸಿಡಿ ಪ್ರಕರಣದ ಸಂತ್ರಸ್ತೆಯ ಪೋಷಕರು ವಾಸವಿದ್ದ ಇಲ್ಲಿನ ಕುವೆಂಪು ನಗರದ ಮನೆಗೆ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ದಿಢೀರ್ ಭೇಟಿ ನೀಡಿ ಅಚ್ಚರಿ ಮೂಡಿಸಿದರು.
ಮನೆಯಲ್ಲಿದ್ದ ಸಂತ್ರಸ್ತೆಯ ತಂದೆ, ತಾಯಿ, ಸಹೋದರರನ್ನು ಭೇಟಿ ಮಾಡಿದ ಸ್ವಾಮೀಜಿ, ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಂತ್ರಸ್ತೆಯ ಕುಟುಂಬ ಎಲ್ಲೋ ಒಂದು ಕಡೆ ನೋವಿನಲ್ಲಿದೆ. ಆ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದೇನೆ ಎಂದು ತಿಳಿಸಿದರು.
ಅಲ್ಲದೆ, ಪ್ರಕರಣವನ್ನು ಎಸ್ಐಟಿ ತನಿಖೆ ಮಾಡಲಿ, ಸತ್ಯಾಸತ್ಯತೆ ಹೊರಬರಲಿ. ಇದೊಂದು ರಾಜಕೀಯ ಷಡ್ಯಂತ್ರ ಅಂತ ನಾನು ಹಿಂದೆಯೇ ಹೇಳಿದ್ದೇನೆ. ಅದರ ಸತ್ಯಾಸತ್ಯತೆ ತಿಳಿಬೇಕಾದರೆ ತನಿಖೆಯಾಗಬೇಕು. ಹಿಂದುಳಿದ ನಾಯಕರು, ದಲಿತ ನಾಯಕರನ್ನು ವ್ಯವಸ್ಥಿತವಾಗಿ ತುಳಿಯುವ ಯತ್ನ ಮೊದಲಿನಿಂದ ನಡೆದುಕೊಂಡು ಬರುತ್ತಿದೆ. ಮುಂದೆಯೂ ಇಂತಹ ಘಟನೆಗಳು ನಡೆಯುತ್ತವೆ ಎಂದರು.
ನಮ್ಮ ಮಗಳು ಒತ್ತಡದಲ್ಲಿದ್ದಾರೆ ಎಂಬ ಪೋಷಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ಎಸ್ಐಟಿಯಿಂದ ತನಿಖೆ ಆಗುತ್ತಿದೆ. ಸತ್ಯಾಸತ್ಯತೆ ಹೊರಬರಲಿ. ಕುಟುಂಬಕ್ಕೆ ಧೈರ್ಯವಾಗಿರಿ, ಸತ್ಯ ಹೊರ ಬರುತ್ತೆ ಅಂತ ಹೇಳಿ ಬಂದಿದ್ದೇನೆ. ಯುವತಿಯ ಪೋಷಕರೇ ಮಗಳು ಕಿಡ್ನ್ಯಾಪ್ ಆಗಿದ್ದಾರೆ ಅಂತ ಹೇಳಿದ್ದಾರೆ. ಅವರ ಕುಟುಂಬದ ಪರ ಖಂಡಿತ ನಾವು ಇರ್ತೀವಿ ಎಂದು ತಿಳಿಸಿದರು.