ಅಥಣಿ(ಬೆಳಗಾವಿ) : ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವವರೆಗೆ ದಂಗೆಗಳು ನಿಲ್ಲಲ್ಲ. ಈ ಗೊಂದಲಗಳಿಗೆ ಬಿಜೆಪಿ ಸರ್ಕಾರವೇ ಕಾರಣೀಭೂತ. ಬಿಜೆಪಿ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲೂ ವಿಫಲವಾಗಿದೆ. ಸದ್ಯ ಅನುದಾನಗಳಿಲ್ಲದೇ ಯೋಜನೆಗಳನ್ನು ತಡೆಹಿಡಿಯಲಾಗಿದೆ. ಈ ಜನ ವಿರೋಧಿ ವಿಚಾರದೊಂದಿಗೆ ಮುಂದಿನ ಚುನಾವಣೆಗೆ ಹೋಗುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದರು.
ಅಥಣಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಗೆ ಆಗಮಿಸಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವವರೆಗೆ ದಂಗೆಗಳು ನಿಲ್ಲಲ್ಲ. ಹಲಾಲ್ ಕಟ್ ಬಗ್ಗೆ ದುರುದ್ದೇಶದಿಂದ ವಿವಾದ ಮಾಡುತ್ತಿದ್ದಾರೆ, ಬಿಜೆಪಿ ಸರ್ಕಾರ ಇದ್ದಮೇಲೆ ಇದೆಲ್ಲ ಸಾಮಾನ್ಯವಾಗಿರುತ್ತದೆ. ನಾವು ಯಾವುದಕ್ಕೆ ಉತ್ತರ ಕೊಡುವುದಿಲ್ಲ, ಸುಖಾಸುಮ್ಮನೆ ರಾಜ್ಯದಲ್ಲಿ ವಿವಾದ ಹುಟ್ಟು ಹಾಕಲಾಗುತ್ತದೆ ಎಂದು ಹೇಳಿದರು.
ಪಂಚರಾಜ್ಯ ಚುನಾವಣೆಯಲ್ಲಿ ನಾವು ಸೋತಿದ್ದು ನಿಜ. ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳನ್ನು ಮುಂದಿಟ್ಟುಕೊಂಡು ನಾವು ಜನರ ಮುಂದೆ ಹೋಗುತ್ತೇವೆ. ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧಿಸುವ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ: ಡಿಕೆಶಿ