ಬೆಳಗಾವಿ: ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ (constitutional recognition to Lingayat religion) ನೀಡುವುದು ಕಷ್ಟಕರ ಎಂದು ಕೇಂದ್ರ ಸರ್ಕಾರ ಉತ್ತರಿಸಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನಕಾರ್ಯದರ್ಶಿ ಡಾ. ಎಸ್.ಎಂ. ಜಾಮದಾರ ಮಾಹಿತಿ ನೀಡಿದರು.
ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, 2018ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಶಿಫಾರಸು ಮಾಡಿದ್ದ ಪ್ರಸ್ತಾವನೆಗೆ ಕೇಂದ್ರ ಸರ್ಕಾರದಿಂದ ಉತ್ತರ ಬಂದಿದೆ. ರಾಜ್ಯದ ಪ್ರಸ್ತಾವನೆ ಒಪ್ಪಲು ಕಷ್ಟವಾಗುತ್ತಿದೆ ಎಂದು ಮೂರು ಕಾರಣಗಳನ್ನು ಕೇಂದ್ರ ನೀಡಿದೆ. ಲಿಂಗಾಯತ ಸಮುದಾಯದಲ್ಲಿ ಎಸ್ಸಿ ಎಸ್ಟಿಗಳಿದ್ದಾರೆ. ಇವರು ಈಗಿರುವ ಮೀಸಲಾತಿ ಕಳೆದುಕೊಳ್ಳಬಹುದು. ವೀರಶೈವ ಮಹಾಸಭಾದವರು ನಾವು ಹಿಂದೂ ಧರ್ಮದ ಭಾಗ ಎಂದಿದ್ದಾರೆ. ಈ ವಿಷಯ ಅನೇಕ ಸಲ ಚರ್ಚೆಗೆ ಬಂದಿದೆ ಎಂದು ಕಾರಣ ನೀಡಿದೆ.
ಸಿಖ್, ಬೌದ್ಧ ಸಮುದಾಯದಲ್ಲಿಯೂ ಎಸ್ಸಿ, ಎಸ್ಟಿಗಳಿದ್ದಾರೆ. ಆದರೂ ಆ ಎರಡೂ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕಿದೆ. ಸಿಖ್, ಬೌದ್ಧರಂತೆ ಲಿಂಗಾಯತಕ್ಕೂ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕು. ಲಿಂಗಾಯತದ 102 ಉಪಪಂಗಡ ಪೈಕಿ ವೀರಶೈವ ಕೂಡ ಒಂದು ಪಂಗಡವಷ್ಟೇ. ಆ ಒಂದು ಪಂಗಡದ ಮಾತು ಕೇಳಿ ನಮಗೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವುದು ಕಷ್ಟ ಎಂದರೆ ಹೇಗೆ? ಬಸವತತ್ವವೇ ಬೇರೆ, ವೀರಶೈವರ ತತ್ವವೇ ಬೇರೆ? ಪ್ರತ್ಯೇಕ ಧರ್ಮಕ್ಕೆ 2018 ಮಾರ್ಚ್ 21ರಂದು ಶಿಫಾರಸು ಮಾಡಿದ್ದು ರಾಜ್ಯ ಸರ್ಕಾರ. ವೀರಶೈವರಂತೆ ನಾವೇನು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿರಲಿಲ್ಲ. ರಾಜಕೀಯ ಉದ್ದೇಶಕ್ಕೆ ವೀರಶೈವರು ಏನೇನೋ ಹೇಳುತ್ತಿದ್ದಾರೆ. ವೀರಶೈವರ ಮಾತು ಕೇಳಿ ಇನ್ನುಳಿದ 101 ಪಂಗಡಕ್ಕೆ ಅನ್ಯಾಯ ಮಾಡುವುದು ಎಷ್ಟು ಸರಿ. ಕೇಂದ್ರದ ಉತ್ತರಕ್ಕೆ ನಂತರ ಬಂದ ಹೆಚ್ಡಿಕೆ ನೇತೃತ್ವದ ಮೈತ್ರಿ ಸರ್ಕಾರ ಪ್ರತಿಕ್ರಿಯೆ ನೀಡಲಿಲ್ಲ. ಬಳಿಕ ಬಂದ ಬಿಎಸ್‌ವೈ, ಬೊಮ್ಮಾಯಿ ಕೂಡ ಪ್ರತಿಕ್ರಿಯೆಗೆ ಹಿಂದೇಟು ಹಾಕುತ್ತಿದ್ದಾರೆ ಎಂದರು.
ಹೋರಾಟ ನಿಂತಿಲ್ಲ: ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆಗಾಗಿ ನಮ್ಮ ಹೋರಾಟ ನಿಂತಿಲ್ಲ. ನಮ್ಮ ಹಕ್ಕಿಗಾಗಿ ಹೋರಾಟ ಮುಂದುವರೆದಿದೆ. ಜನರಲ್ಲಿ ಅರಿವು ಮೂಡಿಸುವ ಕೆಲಸ ಭರದಿಂದ ಸಾಗಿದೆ. ಕರ್ನಾಟಕಕ್ಕಿಂತ ಮಹಾರಾಷ್ಟ್ರದಲ್ಲಿ ಜಾಗೃತಿ ಹೆಚ್ಚಾಗಿದೆ. ಕರ್ನಾಟಕದಲ್ಲಿಯೂ ಜಾಗೃತಿ ಹೆಚ್ಚಿಸಲು ಬೆಳಗಾವಿಯಲ್ಲಿ ಕಾರ್ಯಾಲಯ ತೆರೆದಿದ್ದೇವೆ. ಕೊರೊನಾ ಕಾರಣಕ್ಕೆ ಸಕ್ರಿಯವಾಗಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಆದರೆ ಈ ಸಮಯದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಿಸಿಕೊಂಡಿದ್ದೇವೆ. ಕಾನೂನು ಹೋರಾಟಕ್ಕೆ ಮೂವರು ನ್ಯಾಯವಾದಿಗಳನ್ನು ನೇಮಕ ಮಾಡಿಕೊಂಡಿದ್ದೇವೆ ಎಂದು ಜಾಮದಾರ ವಿವರಿಸಿದರು.