ಚಿಕ್ಕೋಡಿ (ಬೆಳಗಾವಿ): ರಾಯಬಾಗ ತಾಲೂಕಿನ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರೈಲ್ವೆ ಸ್ಟೇಷನ್ನಿಂದ ಬೆಕ್ಕೇರಿ ಮತ್ತು ಬೊಮ್ಮನಾಳಕ್ಕೆ ಹೋಗುವ ರಸ್ತೆಗಳು ಸುಮಾರು ಎರಡು ವರ್ಷಗಳಿಂದ ಹದಗೆಟ್ಟು ಹೋಗಿದ್ದು, ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.
ಜಿಲ್ಲಾದ್ಯಂತ ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ರಸ್ತೆಗಳು ಕೆಸರು ಗುಂಡಿಗಳಾಗಿವೆ. ಇದರಿಂದ ವಾಹನವೊಂದು ರಸ್ತೆಯಲ್ಲಿ ಸಿಲುಕಿಕೊಂಡಿದ್ದು, ಕ್ರೇನ್ ಹಾಗೂ ಜೆಸಿಬಿ ಮೂಲಕ ವಾಹನವನ್ನು ಹೊರ ತೆಗೆಯಲಾಗಿದೆ. ಬೆಕ್ಕೇರಿ ಮತ್ತು ಬೊಮ್ಮನಾಳಕ್ಕೆ ಹೋಗುವ ರಸ್ತೆಗಳನ್ನು ಸರಿಪಡಿಸುವಂತೆ ಹಲವು ಬಾರಿ ಜನಪ್ರತಿನಿಧಿ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಆದಷ್ಟು ಬೇಗ ಈ ರಸ್ತೆಗಳನ್ನು ಸರಿಪಡಿಸಬೇಕು. ಒಂದು ವೇಳೆ ರಸ್ತೆ ದುರಸ್ತಿಪಡಿಸದಿದ್ದರೆ, ಉಗ್ರ ಹೋರಾಟ ಮಾಡಲಾಗುವುದು ಎಂದು ಸ್ಥಳೀಯರಾದ ಜ್ಯೋತಿಬಾ ಮಾನೆ ಎಚ್ಚರಿಸಿದ್ದಾರೆ.