ಚಿಕ್ಕೋಡಿ(ಬೆಳಗಾವಿ): ಆರ್ಎಸ್ಎಸ್ ಅನ್ನು ನಿಷೇಧ ಮಾಡಲು ಹಿಂದೆ ಮಾಜಿ ಪ್ರಧಾನಿಗಳಾದ ಪಂಡಿತ್ ಜವಾಹರಲಾಲ್ ನೆಹರು ಕೈ ಹಾಕಿದ್ರು ಆಗಲಿಲ್ಲ. ಇಂದಿರಾಗಾಂಧಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆರ್ಎಸ್ಎಸ್ ಲಕ್ಷಾಂತರ ಜನ ಕಾರ್ಯಕರ್ತರಿರುವಂತಹ ಸಂಘವಾಗಿದ್ದು, ಇದೀಗ ಸಿದ್ದರಾಮಯ್ಯ ಅವರು ಆರ್ಎಸ್ಎಸ್ ವಿಷಯಕ್ಕೆ ಕೈ ಹಾಕಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಹೇಳಿದ್ದಾರೆ.
ರಾಯಬಾಗ ಪಟ್ಟಣದಲ್ಲಿ ಆರ್ಎಸ್ಎಸ್ ಚಡ್ಡಿ ಸುಟ್ಟು ಹಾಕುತ್ತೇವೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಆರ್ಎಸ್ಎಸ್ ವಿಷಯಕ್ಕೆ ಈಗ ಸಿದ್ದರಾಮಯ್ಯ ಕೈಹಾಕಿದ್ದಾರೆ. ಕಾಂಗ್ರೆಸ್ ಸುಟ್ಟು ಹೋಗುತ್ತದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಷ್ಟ್ರೀಯ ಭಕ್ತಿ ನಿರ್ಮಾಣದ ಕಾರ್ಯ ಮಾಡುತ್ತದೆ. ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಎಂಬ ನಂಬಿಕೆಯಲ್ಲಿ ವಿಶ್ವಾಸ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇಂತಹ ಸಂಘವನ್ನು ರಾಜಕಾರಣಕ್ಕೆ ತರುವುದು ಸಿದ್ದರಾಮಯ್ಯಗೆ ಶೋಭೆ ತರುವುದಿಲ್ಲ. ತುಷ್ಟೀಕರಣ ನೀತಿ ಎಂಬ ಪದಗಳನ್ನು ಅಲ್ಪಸಂಖ್ಯಾತರ ಮತಕ್ಕಾಗಿ ಬಳಕೆ ಮಾಡುತ್ತಿದ್ದಾರೆ. ಇದು ಮಾಜಿ ಮುಖ್ಯಮಂತ್ರಿಯಾಗಿರುವಂತಹ ಸಿದ್ದರಾಮಯ್ಯ ಅವರಿಗೆ ಶೋಭೆ ತರುವ ವಿಚಾರವಲ್ಲ ಎಂದು ಕಟೀಲ್ ಹೇಳಿದರು.
ಇದನ್ನೂ ಓದಿ: ಪಠ್ಯ ಪರಿಷ್ಕರಣೆ ವಿವಾದ: ಆರ್ಎಸ್ಎಸ್ ಕಚೇರಿಯಲ್ಲಿ ಬಿಜೆಪಿ ನಾಯಕರ ಜೊತೆ ಸುದೀರ್ಘ ಸಮಾಲೋಚನೆ