ಬೆಳಗಾವಿ: ವಿಶ್ವೇಶ್ವರಯ್ಯ ನಗರದಲ್ಲಿ ಸ್ಮಾರ್ಟ್ ಸಿಟಿ ಸಹಯೋಗದಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಕಮಾಂಡ್ ಸೇಂಟರ್ನಲ್ಲಿರುವ ವಾರ್ರೂಮ್ಗೆ ನೂತನ ಸಂಸದೆ ಮಂಗಳಾ ಅಂಗಡಿಯವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ, ಕೊರೊನಾ ಹೆಲ್ಪ್ಲೈನ್ ಸ್ಥಗಿತವಾಗಿದ್ದು ಕಂಡು ಅಸಮಾಧಾನ ವ್ಯಕ್ತಪಡಿಸಿದರು.
ನಿತ್ಯ ಸರಾಸರಿ 900ಕ್ಕೂ ಅಧಿಕ ಸೋಂಕಿತರು ವಾರ್ರೂಂಗೆ ಕರೆ ಮಾಡುತ್ತಿದ್ದಾರೆ. ಆದ್ರೆ ಇಲ್ಲಿನ ಬಹಳಷ್ಟು ಸಹಾಯವಾಣಿ ಸಂಖ್ಯೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ದುರಸ್ತಿಗೆ ಬಂದಿರುವ ಫೋನ್ಗಳನ್ನು ಸರಿಪಡಿಸಿಲ್ಲವೇಕೆ? ನಿಮ್ಮಿಂದ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕರ್ತವ್ಯದಲ್ಲಿದ್ದಾಗ ಮೊಬೈಲ್ ಸ್ವಿಚ್ ಆಫ್ ಮಾಡಬೇಡಿ
ಅಲ್ಲದೆ, ಸ್ಥಗಿತಗೊಂಡಿರುವ ನಂಬರ್ಗಳನ್ನು ತಕ್ಷಣವೇ ಸರಿಪಡಿಸಬೇಕು ಎಂದು ನಿರ್ದೇಶನ ನೀಡಿದರು. ಕೊರೊನಾ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತರಾಗಬೇಕು. ಯಾವುದೇ ಕಾರಣಕ್ಕೆ ಕರ್ತವ್ಯದಲ್ಲಿದ್ದಾಗ ಮೊಬೈಲ್ ಸ್ವಿಚ್ಡ್ ಆಫ್ ಮಾಡಬಾರದು. ಇಂತಹ ಘಟನೆ ನಡೆದರೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಚ್ಚರಿಕೆ ನೀಡಿದರು.
ಇದೆ ಸಂದರ್ಭದಲ್ಲಿ ಕೋವಿಡ್ ಕುರಿತ ಸಹಾಯಕ್ಕಾಗಿ ಜನರು ಎಷ್ಟೇ ಕರೆ ಮಾಡಿದ್ರೂ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬಂದಿತ್ತು, ಇದರಿಂದ ಗರಂ ಆದ ಶಾಸಕ ಅನಿಲ್ ಬೆನಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.