ಬೆಳಗಾವಿ: ಬಿಜೆಪಿ ಸರ್ಕಾರದಲ್ಲಿ ಸಚಿವರಾಗುವುದು ನಮ್ಮ ಕೈಯಲ್ಲಿಲ್ಲ. ಇದನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದು ಬಿಜೆಪಿ ನೂತನ ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಹಂಚಿಕೆಯ ಪರಮಾಧಿಕಾರ ಸಿಎಂಗೆ ಇದೆ. ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುದನ್ನು ಸಿಎಂ ನಿರ್ಧರಿಸಲಿದ್ದಾರೆ. ನಮ್ಮನ್ನು ಸಂಪುಟಕ್ಕೆ ತೆಗೆದುಕೊಳ್ಳುತ್ತಾರೋ? ಇಲ್ಲವೋ? ಎಂಬುವುದು ನಮಗೆ ಗೊತ್ತಿಲ್ಲ ಎಂದರು.
ಗೋಕಾಕ್ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ರಮೇಶನದಲ್ಲ, ಅದು ಯಡಿಯೂರಪ್ಪನವರ ಗೆಲುವು ಎಂಬ ಸಹೋದರ ಲಖನ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಹೌದು ಯಡಿಯೂರಪ್ಪನವರೇ ನಮ್ಮನ್ನು ಗೆಲ್ಲಿಸಿದ್ದು. ಒಂದು ಸಾವಿರ ಮತ ಪಡೆಯುವ ಯೋಗ್ಯತೆ ನನಗಿಲ್ಲ ಎಂದು ವ್ಯಂಗ್ಯವಾಡಿದರು. ಇನ್ನು ಶಾಸಕ ಸತೀಶ್ ಜಾರಕಿಹೊಳಿ ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿಸಲ್ಲ. ಪ್ರತಿಕ್ರಿಯಿಸಿದರೆ ಹುಚ್ಚುನಾಯಿಗೆ ಕಲ್ಲು ಹೊಡೆದಂತೆ ಆಗುತ್ತದೆ ಎಂದರು.
ಪೌರತ್ವ ಕಾಯ್ದೆ ಜಾರಿಯಿಂದ ಭಾರತದ ಮುಸ್ಲಿಂರು ಹೆದರುವ ಅವಶ್ಯಕತೆ ಇಲ್ಲ. ಈಗಾಗಲೇ ಪ್ರಧಾನಿ ಮೋದಿಯವರು ಈ ಕುರಿತು ಸ್ಪಷ್ಟವಾಗಿ ಹೇಳಿದ್ದಾರೆ. ಯಾರದೋ ಮಾತು ಕೇಳಿಕೊಂಡು ಗಲಾಟೆ ಮಾಡುವುದು ಒಳ್ಳೆಯದಲ್ಲ. ಅವರಿಗೆ ಆತಂಕವಿದ್ದರೆ ಚರ್ಚಿಸಿ ಸರಿಪಡಿಸಿಕೊಳ್ಳಬಹುದು ಎಂದರು.