ಬೆಳಗಾವಿ: ನನಗೆ ಸಚಿವ ಸ್ಥಾನ ನೀಡಲು ಎದುರಾಗಿರುವ ಸಮಸ್ಯೆ ಏನು ಎಂಬುದರ ಬಗ್ಗೆ ನನ್ನ ಬಳಿಯೂ ಉತ್ತರವಿಲ್ಲ. ಪಕ್ಷದ ನಾಯಕರ ಬಳಿಯೂ ಉತ್ತರ ಇಲ್ಲವೆಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 7 ಶಾಸಕರನ್ನು ಸಚಿವರನ್ನಾಗಿ ಮಾಡುತ್ತಿರುವುದಕ್ಕೆ ಸಂತೋಷವಿದೆ. ನಾನು ಅಥಣಿ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿದ್ದೇನೆ. ನನಗೆ ಸಿಎಂ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ. ಕಾಲ ಕೂಡಿ ಬಂದಾಗ ಮಂತ್ರಿ ಮಾಡುತ್ತಾರೆ. ಅದರಲ್ಲೇನೂ ತೊಂದರೆ ಇಲ್ಲ. ಸಚಿವ ಸ್ಥಾನದ ಭರವಸೆ ಕೊಟ್ಟಿದ್ದಾರೆ. ಏನೋ ಸಮಸ್ಯೆ ಆಗಿರಬಹುದು, ವಿಳಂಬ ಆಗಿದೆಯಷ್ಟೇ. ಆದರೆ, ನಾನು ಪಕ್ಷಕ್ಕೆ ಮುಜುಗರ ಆಗುವ ರೀತಿ ಹೇಳಿಕೆ ನೀಡಲ್ಲ. ನನ್ನ ಕ್ಷೇತ್ರಕ್ಕೆ ಬೇಕಾದ ಕೆಲಸಗಳು ಆಗುತ್ತಿವೆ. ಹಂತ-ಹಂತವಾಗಿ ಸಚಿವರನ್ನಾಗಿ ಮಾಡಬಹುದು. ನನ್ನನ್ನು ಮಾಡಬಹುದೆಂಬ ವಿಶ್ವಾಸವಿದೆ ಎಂದರು.
ಆದರೆ, ನನ್ನ ಏಕೆ ಸಚಿವರನ್ನಾಗಿ ಮಾಡಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ. ಇದಕ್ಕೆ ಉತ್ತರ ಯಾರಿಂದಲೂ ಬರುತ್ತಿಲ್ಲ. ಗೆದ್ದ 12 ಶಾಸಕರ ಪೈಕಿ 11 ಶಾಸಕರನ್ನು ಸಚಿವರನ್ನಾಗಿ ಮಾಡಿದ್ದಾರೆ. ನನ್ನದೇನಾದರೂ ಸಮಸ್ಯೆ ಆಗಿ ಬಿಟ್ಟಿರಬಹುದು. ನನ್ನನ್ನು ಕಡೆಗಣಿಸಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ನನ್ನ ಕ್ಷೇತ್ರದವರೇ ಡಿಸಿಎಂ ಆಗಿರೋದಕ್ಕೆ ನನಗೆ ಸಂತೋಷ ಇದೆ. ಉಪಚುನಾವಣೆ ವೇಳೆ ಸಿಎಂ ಬಿಎಸ್‌ವೈ ಸೇರಿ ಎಲ್ಲರೂ ಮಾತನಾಡಿದ್ದರು. ಆದರೀಗ ಅವರಲ್ಲಿಯೂ ಉತ್ತರ ಇಲ್ಲ, ನನ್ನಲ್ಲಿಯೂ ಉತ್ತರ ಇಲ್ಲ. ಕಾಲ ಕೂಡಿ ಬಂದಾಗ ಸಚಿವ ಸ್ಥಾನ ಸಿಗುತ್ತದೆ. ಸಿಎಂಗೂ ಕೆಲವೊಂದು ಸಮಸ್ಯೆ ಇರುತ್ತವೆ, ಎಲ್ಲರನ್ನೂ ಒಗ್ಗೂಡಿಸಿ ಕರೆದೊಯ್ಯಬೇಕು. ಬಿಜೆಪಿಗೆ ಬಂದ ಮೇಲೆ ಪಕ್ಷ ಕಟ್ಟುವ ಕಾರ್ಯದಲ್ಲಿ ತೊಡಗಿಸಿದ್ದೇವೆ ಎಂದರು.
ಕಾಂಗ್ರೆಸ್ ತೊರೆದವರು ಮತ್ತೆ ಪಕ್ಷಕ್ಕೆ ಬರ್ತಾರೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅವರದ್ದೇನೂ ಭಾವನೆ ಇದೆಯೋ ಗೊತ್ತಿಲ್ಲ. ಒಂದು ಪಕ್ಷ ಬಿಟ್ಟು ಬರೋದು ಸಣ್ಣ ಮಾತಲ್ಲ. ಅದು ದೊಡ್ಡ ರಾಜಕೀಯ ವಿದ್ಯಮಾನ ಎಂದು ತಿರುಗೇಟು ನೀಡಿದರು.