ಬೆಳಗಾವಿ: ಸಿದ್ದರಾಮಯ್ಯ ಕರ್ನಾಟಕದ ಸಿಎಂ ಆಗಿದ್ದನ್ನು ಮರೆತಿದ್ದಾರೆ. ಬಹುತೇಕ ಪಾಕಿಸ್ತಾನದ ಫೈಸಲಾಬಾದ್ ರಾಜ್ಯದ ಸಿಎಂ ಎಂದುಕೊಂಡು ಸಾವರ್ಕರ್ ಭಾವಚಿತ್ರ ಮುಸ್ಲಿಂ ಏರಿಯಾದಲ್ಲಿ ಇರಬಾರದು ಅಂತಾ ಹೇಳಿಕೆ ಕೊಟ್ಟಿರಬೇಕು ಎಂದು ಶಾಸಕ ಅಭಯ್ ಪಾಟೀಲ್ ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊಟ್ಟೆ ಎಸೆತ ಪ್ರಕರಣ ಪ್ರಾರಂಭ ಆಗಿದ್ದು ಅವರ ಹೇಳಿಕೆಯಿಂದಾಗಿ. ಮೊಟ್ಟೆ ಎಸೆದ ಘಟನೆ ಆಗಲಿಕ್ಕೆ ಕಾರಣ ಯಾರು? ಪ್ರತಿದಿನ ಈ ರೀತಿ ಹುಚ್ಚುಚ್ಚು ಹೇಳಿಕೆ ಕೊಟ್ರೆ ಜನ ಏನ್ ಮಾಡಬಹುದು?. ಮುಸ್ಲಿಂ ಏರಿಯಾದಲ್ಲಿ ಫೋಟೋ ಹಾಕಬಾರದು ಅಂತಾ ಸಂವಿಧಾನದಲ್ಲಿ ಬರೆದಿದೆಯಾ? ಮುಸ್ಲಿಂ ಏರಿಯಾ ಅಂದ್ರೆ ಈ ಸಮಾಜ ಭಾರತ ಬಿಟ್ಟು ಐತೇನು? ಎಂದು ಪ್ರಶ್ನಿಸಿದ್ರು.
ಜನ ಸಿದ್ದರಾಮಯ್ಯಗೆ ಬುದ್ಧಿ ಕಲಿಸಬೇಕು: ಇವತ್ತು ಸಿದ್ದರಾಮಯ್ಯ ಸಾಹೇಬ್ರು ಅಲ್ಯಾಕೆ ಪೋಸ್ಟರ್ ಹಾಕಿದ್ರಿ ಅಂತಾರೆ. ನಾಳೆ ಅಲ್ಲಿ ಹಿಂದೂಗಳ ಮೇಲೆ ಹಲ್ಲೆ ಆದ್ರೆ, ಅಲ್ಲೇಕೆ ಹಿಂದೂಗಳು ಓಡಾಡುತ್ತೀರಿ ಅಂತಾರೆ. ನಾಡಿದ್ದು ಆ ಜಾಗ ಅವರದ್ದು ಕೊಟ್ಟು ಬಿಡಿ ಅಂತಾರೆ. ಹೀಗಾಗಿ ಇದು ಸಿದ್ದರಾಮಯ್ಯನವರ ಮೊದಲ ಹೆಜ್ಜೆ. ಇದನ್ನು ಜನ ಅರ್ಥಮಾಡಿಕೊಂಡು, ಎಚ್ಚೆತ್ತು ಅವರಿಗೆ ಬುದ್ಧಿ ಕಲಿಸಬೇಕು. ಅವರು ಒಂದು ಕೋಟಿ ಜನರನ್ನು ಸೇರಿಸಿ ಕೊಡಗು ಚಲೋ ಮಾಡಲಿ. ಅಲ್ಲಿನ ಜನರಿಗೆ ಟಿಪ್ಪು ಸುಲ್ತಾನ್ ಮಾಡಿದ ಅನ್ಯಾಯ ಗೊತ್ತಿದೆ. ಅವರು ತಕ್ಕ ಉತ್ತರ ಕೊಡ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ಸಮಾಜಘಾತುಕ ಶಕ್ತಿಗಳು ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದಾರೆ: ಈಶ್ವರ್ ಖಂಡ್ರೆ
ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಸಿದ್ದರಾಮಯ್ಯ ಪಶ್ಚಾತ್ತಾಪದ ಬಗ್ಗೆ ಮಾತನಾಡಿ, ಇವತ್ತು ಅವರಿಗೆ ಪ್ರಾಯಶ್ಚಿತ ಆಗಿದೆ. ಈಗ ಇಂತಹ ಹೇಳಿಕೆ ನೀಡಿ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಪ್ರಾಯಶ್ಚಿತ ಬೇಕಂದ್ರೆ ಬರುವ ದಿನಗಳಲ್ಲಿ ಜನ ಬುದ್ಧಿ ಕಲಿಸಬೇಕು. ಮೊದಲು ತಪ್ಪು ಮಾಡೋದು, ಆಮೇಲೆ ಪ್ರಾಯಶ್ಚಿತ ಅನ್ನೋದು. ವೋಟ್ ಬರ್ತಾವೆ ಅಂತಾ ಹಿಂದಿನ ಸಾರಿ ಆ ರೀತಿ ಮಾಡಿದ್ರು, ಅದು ರಿವರ್ಸ್ ಆಯ್ತು. ಈಗ ವೋಟ್ ಬರಬೇಕು ಅಂತಾ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ಅದಕ್ಕಿಂತ ಹೆಚ್ಚು ರಿವರ್ಸ್ ಆಗ್ತಿದೆ. ನಾಳೆ ಮತ್ತೆ ನಂದು ತಪ್ಪಾಯ್ತು ಅಂತಾ ಹೇಳಿಕೆ ಬರಬಹುದು. ಹೀಗಾಗಿ ಜನ ಮೊಸಳೆ ಕಣ್ಣೀರು ಸುರಿಸುವವರನ್ನು ನಂಬಬಾರದು ಎಂದು ಶಾಸಕ ಅಭಯ್ ಪಾಟೀಲ್ ವಾಗ್ದಾಳಿ ನಡೆಸಿದರು.