ಬೆಳಗಾವಿ: ಸರ್ಕಾರ ತೆಗೆಯುತ್ತೀನಿ ಎನ್ನುವ ಹುಚ್ಚರು ಮೊದಲು ತಮ್ಮ ಹುಚ್ಚುತನವನ್ನು ಬಿಡಬೇಕು ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಮುಖ್ಯಮಂತ್ರಿ ಸ್ಥಾನದ ಕನಸು ಕಾಣುತ್ತಿರುವ ಸಚಿವ ಮುರುಗೇಶ್ ನಿರಾಣಿಗೆ ತಿರುಗೇಟು ನೀಡಿದರು.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಸಿಎಂ ಆಗುತ್ತೇನೆ ಎಂದು ಯಾರೂ ತಿರುಕನ ಕನಸು ಕಾಣಬಾರದು. ನಮ್ಮದು ಶಿಸ್ತಿನ ಪಕ್ಷವಾಗಿದೆ. ಸಿಎಂ ಬೊಮ್ಮಾಯಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನಾಲ್ಕು ತಿಂಗಳಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಪದೇ ಪದೆ ಹೀಗೆ ಹೇಳುತ್ತಿದ್ದರೆ ಪಕ್ಷ ಶಿಸ್ತು ಕ್ರಮ ಕೈಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಂಪುಟ ಪುನಾರಚನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಂಪುಟ ಪುನಾರಚನೆ ಮಾಡುವುದು ಸಿಎಂ ಅವರ ಪರಮಾಧಿಕಾರ. 2023ರ ಚುನಾವಣೆ ಅವರ ನೇತೃತ್ವದಲ್ಲೇ ನಡೆಯಲಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಯಾವುದೇ ಗೊಂದಲ ಇಲ್ಲವೆಂದು ತಿಳಿಸಿದರು.
ಮತಾಂತರ ನಿಷೇಧ ಕಾಯ್ದೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಪರಿಸ್ಥಿತಿ ಏನು ಎನ್ನುವುದಕ್ಕಿಂತ ಏನು ಇದೆ ಎನ್ನುವ ಬಗ್ಗೆ ಯೋಚಿಸಬೇಕು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ವಿಧೇಯಕವನ್ನು ಸಚಿವ ಸಂಪುಟದಲ್ಲಿ ತರಲು ಅನುಮತಿ ನೀಡಿದ್ದರು. ಅದಕ್ಕೆ ನಾವು ಕೆಲವೊಂದು ಮಾರ್ಪಾಡು ಮಾಡಿದ್ದೇವೆ ಅಷ್ಟೇ ಎಂದರು.
ನಮಗೆ ಎಲ್ಲಕ್ಕಿಂತ ದೊಡ್ಡದು ರಾಜ್ಯ, ರಾಜ್ಯಕಿಂತ ದೊಡ್ಡದು ದೇಶ. ದೇಶಕ್ಕಿಂತ ದೊಡ್ಡದು ಸಮಾಜ. ಸಮಾಜದಲ್ಲಿ ಮತಾಂತರ ಕಾಯ್ದೆ ತಂದಿರುವುದು ಒಳ್ಳೆಯದಕ್ಕಾಗಿ. ಅವರು ತಂದಿರುವುದನ್ನ ನಾವು ಒಪ್ಪಿಕೊಂಡಿದ್ದೇವೆ. ಚರ್ಚೆ ಇಲ್ಲದೆ ವಿಧೇಯಕ ಒಪ್ಪಿಕೊಂಡರೆ ಸ್ವಲ್ಪ ಬೆಲೆ ಉಳಿಯುತ್ತದೆ ಎಂದು ತಿಳಿಸಿದರು.