ಬೆಳಗಾವಿ: ಕೋವಿಡ್ ನಿಯಂತ್ರಣಕ್ಕೆ ಹಣ ಬೇಕಿರುವ ಕಾರಣಕ್ಕೆ ತೈಲ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ಸಚಿವ ಉಮೇಶ ಕತ್ತಿ ತಿಳಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಕೋವಿಡ್ ಸಮಯದಲ್ಲಿ ಸರ್ಕಾರಕ್ಕೆ ಹಣ ಬೇಡವೇ? ಕೋವಿಡ್ ನಿಯಂತ್ರಿಸಲು ಸರ್ಕಾರಕ್ಕೆ ಹಣದ ಅವಶ್ಯಕತೆ ಇದೆ. ಈ ಕಾರಣಕ್ಕೆ ತೈಲ ಬೆಲೆ ಹೆಚ್ಚಳವಾಗಿದೆ. ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲೇ ಕಚ್ಚಾ ತೈಲ ಬೆಲೆ ಜಾಸ್ತಿಯಾಗಿದೆ. ರಾಜ್ಯ-ಕೇಂದ್ರ ಸರ್ಕಾರ ಕೂಡ ತೈಲದ ಮೇಲಿನ ಸುಂಕವನ್ನು ಹೆಚ್ಚಿಸಿವೆ' ಎಂದರು.
ತೈಲಬೆಲೆ ಇಳಿಕೆ ಸಂಬಂಧ ಪ್ರಧಾನಿ ಮೋದಿ, ಹಣಕಾಸು ಸಚಿವರು ಈಗಾಗಲೇ ಚರ್ಚಿಸಿದ್ದಾರೆ. ದೀಪಾವಳಿ ಹಬ್ಬದೊಳಗೆ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಕಾಂಗ್ರೆಸ್ಗೆ ತಿರುಗೇಟು:
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ದಾಳಿ ವಿಚಾರವಾಗಿ, ಪ್ರವಾಸದಲ್ಲಿರುವ ಕಾರಣ ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ನಾನು ಗಮನಿಸಿಲ್ಲ ಎಂದರು.
'ಹೆಬ್ಬೆಟ್ಟು ಗಿರಾಕಿ' ಟೀಕೆಗೆ ತಿರುಗೇಟು:
ಪ್ರಧಾನಿ ನರೇಂದ್ರ ಮೋದಿ ಹೆಬ್ಬೆಟ್ಟು ಗಿರಾಕಿ ಎಂಬ ಕಾಂಗ್ರೆಸ್ ಟೀಕೆಗೆ ಕತ್ತಿ ತಿರುಗೇಟು ನೀಡಿದರು. 'ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಒಳ್ಳೆಯ ಸರ್ಕಾರ ಕೊಟ್ಟಿದ್ದಾರೆ. ಜನಪರ ಆಡಳಿತವನ್ನು ನೀಡುತ್ತಿದ್ದಾರೆ. ಬಡವರಿಗಾಗಿ ಉಜ್ವಲ ಯೋಜನೆ ಜಾರಿಗೊಳಿಸಿದ್ದಾರೆ. ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಕೆಲಸವಿಲ್ಲದೇ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ' ಎಂದು ಹೇಳಿದರು.