ಬೆಳಗಾವಿ : ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುವ ಮಹಾನ್ ನಾಯಕ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ್ ನಾರಾಯಣ ಬಣ್ಣಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‌ವೈ ನಮ್ಮ ನಾಯಕ. ಎಲ್ಲ ಕಾರ್ಯಕ್ರಮದಲ್ಲಿ ತುದಿಗಾಲಲ್ಲಿ ನಿಂತು ಸಕ್ರಿಯವಾಗಿ ಭಾಗಿಯಾಗಬೇಕು ಎನ್ನುವ ಅಗ್ರಮಾನ್ಯ ನಾಯಕ. ಎರಡೂ ಉಪಚುನಾವಣೆಯಲ್ಲಿ ಭಾಗಿಯಾಗಿ ಪ್ರಚಾರ ಮಾಡಲಿದ್ದಾರೆ ಎಂದರು.
ಐಟಿ ದಾಳಿಗೂ ಬಿಎಸ್‌ವೈಗೂ ಸಂಬಂಧವಿಲ್ಲ : ಯಡಿಯೂರಪ್ಪ ಅವರಿಗೂ ಐಟಿ ದಾಳಿಗೂ ಯಾವುದೇ ಸಂಬಂಧ ಇಲ್ಲ. ಐಟಿ ದಾಳಿ ಅವರಿಗೆ ಜೋಡಿಸುವುದು ಉಚಿತವಲ್ಲ. ಕಾನೂನಲ್ಲಿ ಆಯಾ ಇಲಾಖೆ ಅವರ ಕೆಲಸ ಮಾಡುತ್ತವೆ. ನಮ್ಮ ಸರ್ಕಾರ ಸತ್ಯದ ಪರವಾಗಿದೆ. ಕಾನೂನು ಪರವಾಗಿ ಕೆಲಸ ಮಾಡುತ್ತಿದೆ. ಮಾಹಿತಿ ಇಲ್ಲದೇ ಇಲ್ಲಸಲ್ಲದ ಮಾತುಗಳನ್ನಾಡುವುದು ಸರಿಯಲ್ಲ ಎಂದರು.
ಡಿಕೆಶಿ ಗುರು ಉಗ್ರಪ್ಪ : ಡಿಕೆಶಿಗೂ ಭ್ರಷ್ಟಾಚಾರಕ್ಕೂ ಬಹಳ ದೂರ ಎಂಬ ವಿ ಎಸ್ ಉಗ್ರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಉಗ್ರಪ್ಪ ಅವರ ಗುರು ಡಿಕೆಶಿ, ಡಿಕೆಶಿ ಅವರ ಗುರು ಉಗ್ರಪ್ಪ. ಎಲ್ಲ ರೀತಿಯ ಪ್ರೋತ್ಸಾಹ ನೀಡಿದ ಗುರುವಿಗೆ ಈಗ ಇದೇ ಉಗ್ರಪ್ಪ ಕಮಿಷನ್ ಗಿರಾಕಿ ಕಮಿಷನ್ ಗುರು ಎನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್‌ಗೆ ಭವಿಷ್ಯ ಇಲ್ಲ : ಕಮಿಷನ್, ಬ್ಲಾಕ್‌ಮೇಲ್, ಕೀಳು ಮಟ್ಟದ ರಾಜಕಾರಣದಿಂದ ಕಾಂಗ್ರೆಸ್ ತುಂಬಿ ತುಳುಕುತ್ತಿದೆ. ಕಾಂಗ್ರೆಸ್‌ಗೆ ಭವಿಷ್ಯ ಇಲ್ಲ. ಅಲ್ಲಿ ಈಗ ನಾಯಕರ ಕೊರತೆ ಇದೆ. ದಿಕ್ಕುದೆಸೆ ಇಲ್ಲದೇ ಕಾರ್ಯ ನಿರ್ವಹಣೆ ಮಾಡುವ ಪರಿಸ್ಥಿತಿ ಕಾಂಗ್ರೆಸ್‌ಗೆ ಬಂದಿದೆ. ರಾಷ್ಟ್ರೀಯ ಅಧ್ಯಕ್ಷರಿಲ್ಲದೆ, ಯಾರು ಅಧ್ಯಕ್ಷರಾಗಬೇಕು? ಎಂಬ ಗೊಂದಲದಲ್ಲಿ ಕಾಂಗ್ರೆಸ್ ಇದೆ. ಯಾವುದೇ ಧ್ಯೇಯ, ಉದ್ದೇಶ ಇಲ್ಲದ ಪಕ್ಷ ಕಾಂಗ್ರೆಸ್ ಎಂದು ಅಶ್ವತ್ಥ್ ನಾರಾಯಣ ದೂರಿದರು.