ಬೆಳಗಾವಿ: ಕಳೆದ 2 ವರ್ಷಗಳ ಅವಧಿಯಲ್ಲಿ ಮಳೆಯಿಂದ ಅಪಾರ ಹಾನಿಯಾಗಿದೆ. ಮಳೆಹಾನಿಯ ಪರಿಹಾರ ಸಂಬಂಧ ಅಧಿವೇಶನ ಬಳಿಕ ಕ್ರಮ ವಹಿಸುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಸಂಬಂಧ ಈಗಾಗಲೇ ಬೆಳಗಾವಿ ಡಿಸಿ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದೇನೆ. ವಿಶೇಷವಾಗಿ ಮನೆಗಳ ಹಾನಿ ಕುರಿತು ಮಾಹಿತಿ ಪಡೆದಿದ್ದೇನೆ. ಅಧಿವೇಶನ ಮುಗಿದ ತಕ್ಷಣವೇ ಜಿಲ್ಲಾಡಳಿತ, ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್, ಹಣಕಾಸು ಇಲಾಖೆ ಜತೆ ಚರ್ಚೆ ನಡೆಸಲಿದ್ದೇನೆ. ಚರ್ಚೆ ಬಳಿಕ ನೆರೆ ಸಂತ್ರಸ್ತರಿಗೆ ಪರಿಹಾರ ಸೂಚಿಸುವೆ ಎಂದರು.
ಬೆಳಗಾವಿಗೆ ಪ್ರಗತಿ ಪರಿಶೀಲನೆ ಬಂದಾಗ ಜಿಲ್ಲಾಡಳಿತಕ್ಕೆ ಕೆಲವೊಂದು ಮಾರ್ಗದರ್ಶನ ಕೊಟ್ಟಿದ್ದೆ. ಆ ಪ್ರಕಾರ ಬೆಳಗಾವಿ ಜಿಲ್ಲಾಡಳಿತ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಹಣಕಾಸು ಇಲಾಖೆಯವರ ಜತೆ ಮಾತನಾಡುವುದು ತುಂಬಾ ಮುಖ್ಯವಿದೆ. ಬೆಳಗಾವಿ ಜಿಲ್ಲೆಯಲ್ಲಿ ವಿಶೇಷವಾಗಿ ಬಿದ್ದ ಮನೆಗಳಿಗೆ ಪರಿಹಾರ ಸಿಕ್ಕಿಲ್ಲ ಎಂಬ ಗೊಂದಲವಿದೆ. ಆ ಗೊಂದಲವನ್ನು ನಿವಾರಣೆ ಮಾಡುವುದಾಗಿ ಎಂದು ಸಿಎಂ ತಿಳಿಸಿದರು.
ಇದನ್ನೂ ಓದಿ: ಕಲಬುರಗಿ ಮೇಯರ್, ಉಪಮೇಯರ್ ಬಗ್ಗೆ 'ನೋ ಕಾಮೆಂಟ್' ಎಂದ ಸಿಎಂ ಬೊಮ್ಮಾಯಿ