ಬೆಳಗಾವಿ: ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಈವರೆಗೆ ಪ್ರವಾಹವೇ ಬಂದಿಲ್ಲ. ಪ್ರವಾಹ ಬಂದ್ರೆ ನಿಭಾಯಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ನಗರದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ಪ್ರವಾಹ ಬಂದಿದೆ ಎಂದು ಸುದ್ದಿ ಪ್ರಸಾರ ಆಗುತ್ತಿದೆ. ಇದನ್ನು ಗಮನಿಸಿದ ಸಿಎಂ ಯಡಿಯೂರಪ್ಪ ನನಗೆ ನಾಲ್ಕು ಸಲ ಫೋನ್ ಮಾಡಿದ್ರು. ಆದ್ರೆ ಜಿಲ್ಲೆ ಹಾಗೂ ಮಹಾರಾಷ್ಟ್ರದಲ್ಲಿ ಕಳೆದೊಂದು ವಾರದಿಂದ ಹೆಚ್ಚು ಮಳೆ ಆಗ್ತಿದೆ ಎಂದರು.
ಮಹಾರಾಷ್ಟ್ರದ ಕೋಯ್ನಾ ಜಲಾಶಯ ಪ್ರಸ್ತುತ 60 ರಷ್ಟು ಭರ್ತಿ ಆಗಿದೆ. ಕೋಯ್ನಾದಿಂದ ಹೆಚ್ಚಿನ ಪ್ರಮಾಣದ ನೀರು ಬಂದ್ರೆ ಮಾತ್ರ ಕೃಷ್ಣಾ ತೀರದಲ್ಲಿ ಪ್ರವಾಹ ಉಂಟಾಗುತ್ತದೆ. ಮಳೆ ಹೆಚ್ಚಳವಾದ್ರೆ ಪ್ರವಾಹ ಬರಬಹುದು. ನೀರು ಜಾಸ್ತಿ ಬಂದ್ರೆ ಆಲಮಟ್ಟಿ ಜಲಾಶಯ ಮೂಲಕ ನಾವು ನೀರು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಸಚಿವರು ತಿಳಿಸಿದರು.
ಮಹಾರಾಷ್ಟ್ರ ಅಧಿಕಾರಿಗಳು ನೀರು ಬಿಡುವ ಮಾಹಿತಿ ನೀಡಲಿ, ಅಥವಾ ನೀಡದಿರಲಿ. ಆದ್ರೆ ನಾವೇ ಓರ್ವ ಅಧಿಕಾರಿಯನ್ನು ಅಲ್ಲಿಗೆ ಕಳಿಸಿಕೊಟ್ಟಿದ್ದೇವೆ. ಕೋಯ್ನಾ ಡ್ಯಾಂನಿಂದ ನೀರು ಬಿಡುಗಡೆ ಪ್ರಮಾಣದ ಬಗ್ಗೆ ನಮ್ಮ ಅಧಿಕಾರಿ ಮಾಹಿತಿ ನೀಡುತ್ತಾರೆ. ಈ ವರ್ಷವೂ ಪ್ರವಾಹ ಬಂದ್ರೆ ನಿಭಾಯಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಸ್ಪಷ್ಟಪಡಿಸಿದರು.
ನಗರದ ಬಳ್ಳಾರಿ ನಾಳಾ ದುರಸ್ತಿ ಮಾಡಿದ್ದಕ್ಕೆ ನಗರಕ್ಕೆ ಹೆಚ್ಚು ಹಾನಿ ಆಗಿಲ್ಲ. ಮಳೆಗಾಲಕ್ಕೂ ಮೊದಲೇ ನಾಲಾ ಕ್ಲೀನ್ ಮಾಡಿಸಿ, ಓಪನ್ ಮಾಡಲಾಗಿದೆ. ಹೀಗಾಗಿ ನೀರು ಒಂದೆಡೆ ನಿಲ್ಲದೇ ಹರಿದು ಹೋಗುತ್ತಿದೆ. ನಾನು ಮಂತ್ರಿ ಆಗಿ 6 ತಿಂಗಳಾಗಿದೆ. ಬಳ್ಳಾರಿ ನಾಲಾ ಸಮಸ್ಯೆ ಪರಿಹಾರಕ್ಕೆ ಕ್ರಮ ಜರುಗಿಸುವುದಾಗಿ ಸಚಿವ ಜಾರಕಿಹೊಳಿ ಭರವಸೆ ನೀಡಿದ್ರು.
ಪ್ರವಾಹದಿಂದ ಬೆಳೆ ನಾಶವಾಗ್ತಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಜಾರಕಿಹೊಳಿ, ಪ್ರವಾಹ ಬಂದ್ರೆ ನಮ್ಮ ರೈತರು ಹೆದರಲ್ಲ. ಬರಕ್ಕೆ ಮಾತ್ರ ಹೆದರುತ್ತಾರೆ. ಡ್ಯಾಂ ಭರ್ತಿ ಆದ್ರೆ ರೈತರು ಖಷಿ ಪಡುತ್ತಾರೆ ಎಂದು ಅಭಿಪ್ರಾಯಪ್ರಟ್ಟರು.