ಬೆಳಗಾವಿ: ಕೊರೊನಾ ಭೀತಿ ಹಿನ್ನೆಲೆ ಜಿಲ್ಲೆಯಲ್ಲಿ ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣೇಶ ಮೂರ್ತಿಯ ಅದ್ಧೂರಿ ನಿಮಜ್ಜನಕ್ಕೆ ಈ ಬಾರಿ ಬ್ರೇಕ್ ಬಿದ್ದಿದೆ.
ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಇಂದಿಗೆ 11 ದಿನ ಕಳೆದಿವೆ. ಹೀಗಾಗಿ ನಗರದ ಸಾರ್ವಜನಿಕ ಗಣೇಶ ಮೂರ್ತಿಗಳ ನಿಮಜ್ಜನ ನಡೆಯುತ್ತಿದೆ. ಪ್ರತೀ ವರ್ಷ ನಗರದಲ್ಲಿ ಅದ್ಧೂರಿಯಾಗಿ ಗಣೇಶ ಮೂರ್ತಿ ಮೆರವಣಿಗೆ ನಡೆಯುತ್ತಿತ್ತು. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸರಳವಾಗಿ ಗಣೇಶ ನಿಮಜ್ಜನ ಕಾರ್ಯ ನಡೆಸಲಾಗುತ್ತಿದೆ.
ಖಡೇಬಜಾರ್ ಎಸ್ಎಂಎಸ್ ವೃತ್ತದಲ್ಲಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶಾಸಕ ಅನಿಲ್ ಬೆನಕೆ ಸಾರ್ವಜನಿಕ ಗಣೇಶ ನಿಮಜ್ಜನಕ್ಕೆ ಚಾಲನೆ ನೀಡಿದರು. ವಿಶೇಷ ಪೂಜೆ, ಮಂಗಳಾರತಿ ಮಾಡಿ ಚಾಲನೆ ನೀಡಲಾಯಿತು.
ಪ್ರತೀ ವರ್ಷ ಕುಂದಾನಗರಿಯಲ್ಲಿ 11 ದಿನಗಳ ಕಾಲ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಅದ್ಧೂರಿಯಾಗಿ ನಿಮಜ್ಜನ ಮಾಡಲಾಗುತ್ತಿತ್ತು. ಡಿಜೆ ಹಾಡು, ಬೃಹತ್ ಮೆರವಣಿಗೆ ಮಾಡಲಾಗುತ್ತಿತ್ತು. ಯುವಕ-ಯುವತಿಯರು ಕುಣಿದು ಕುಪ್ಪಳಿಸುತ್ತಿದ್ದರು. ಆದರೆ ಈ ಬಾರಿ ಮಹಾಮಾರಿ ಕೊರೊನಾ ಭೀತಿ ಹಿನ್ನೆಲೆ ಅದ್ಧೂರಿ ಮೆರವಣಿಗೆಗೆ ಬ್ರೇಕ್ ಬಿದ್ದಿದೆ.