ಬೆಳಗಾವಿ : ಶಾಲಾ ಕಟ್ಟಡ ದುರಸ್ತಿ ಕಾರ್ಯದ ಕುರಿತು ಪ್ರಶ್ನಿಸಿದ್ದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುದೇನೂರ ಸರ್ಕಾರಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಹಾಗೂ ಸದಸ್ಯನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಿಇಒ ಮಲ್ಲಿಕಾರ್ಜುನ ಅಲಸೆ ನೀಡಿದ ದೂರಿನ ಮೇರೆಗೆ ರಾಮದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಇಒಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಹಿಡಿದು ಎಳೆದಾಡಿ ಜೀವ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆ ಎಸ್‌ಡಿಎಂಸಿ ಅಧ್ಯಕ್ಷ ಮುತ್ತಣ್ಣ ಕಂಬಾರ, ಸದಸ್ಯ ನೀಲಪ್ಪ ಪೂಜಾರ್ ವಿರುದ್ಧ ಐಪಿಸಿ ಸೆಕ್ಷನ್ 1860 ರ (U/s - 341, 353, 504, 506, 34)ರಡಿ ಕೇಸ್ ದಾಖಲಾಗಿದೆ.
ಮುದೇನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಮಳೆಯಿಂದ ಶಿಥಿಲಾವಸ್ಥೆ ತಲುಪಿತ್ತು. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲಾ ಆವರಣದಲ್ಲಿ ಗ್ರಾಮಸ್ಥರು ಸೀರೆ ಟೆಂಟ್ ನಿರ್ಮಿಸಿದ್ದರು. ಈ ವೇಳೆ ರಾಮದುರ್ಗ ಬಿಇಒ ಮಲ್ಲಿಕಾರ್ಜುನ ಅಲಸೆ ಸ್ಥಳಕ್ಕೆ ಭೇಟಿ ನೀಡಿದ್ದು, ಮಾಧ್ಯಮದವರನ್ನ ಕಂಡು ಸ್ಥಳದಿಂದ ತೆರಳಲು ಯತ್ನಿಸಿದ್ದರು. ಈ ವೇಳೆ ಬಿಇಒ ಕಾರು ತಡೆದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ, ಬಿಇಒ ಕೈ ಹಿಡಿದು ಮೇಲ್ಛಾವಣಿ ಕುಸಿದ ಶಾಲಾ ಕೊಠಡಿಯನ್ನು ಎಸ್‌ಡಿಎಂಸಿ ಸದಸ್ಯ ನೀಲಪ್ಪ ಪೂಜಾರ್ ತೋರಿಸಿದ್ದರು. ಬಳಿಕ ಮಲ್ಲಿಕಾರ್ಜುನ ಸ್ಥಳದಿಂದ ತೆರಳಿದ್ದರು.
ಇದನ್ನೂ ಓದಿ: ಅಪ್ಪನ ಹಣ ಕದ್ದು, ಕೋಟಾ ನೋಟು ಇಟ್ರು.. 25 ದಿನದಲ್ಲಿ 4 ಲಕ್ಷ ಖರ್ಚು ಮಾಡಿದ್ರು 8-9 ವರ್ಷದ ಅಣ್ತಮ್ಮ!