ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನ ಮುದೇನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುರಸ್ತಿಗೆ ಜಿಲ್ಲಾಡಳಿತ 20 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ. ಪ್ರಸಕ್ತ ಸಾಲಿನ ಕ್ರಿಯಾ ಯೋಜನೆಯಡಿ ಅಳವಡಿಸಿಕೊಂಡು ದುರಸ್ತಿ ಕಾಮಗಾರಿ ಇಂದಿನಿಂದಲೇ ಆರಂಭಗೊಂಡಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿ 10 ಲಕ್ಷ ರೂ. ತಾಲೂಕು ಪಂಚಾಯಿತಿ 5 ಲಕ್ಷ ರೂ. ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ 5 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗುವುದು. ತಹಶೀಲ್ದಾರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಆರಂಭಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಶಾಲೆ ಆರಂಭವಾದ ಮೊದಲ ದಿನವೇ ಮುದೇನೂರ ಗ್ರಾಮದ ಮಕ್ಕಳು ಟೆಂಟ್‌ನಲ್ಲಿ ಪಾಠ ಕಲಿಯುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಸುರಿದ ಮಳೆಗೆ ಶಾಲೆಯ 11 ಕೊಠಡಿಗಳ ಪೈಕಿ 9 ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿದ್ದವು. ಕಟ್ಟಡ ದುರಸ್ತಿಗೆ ಪೋಷಕರು ಹಲವು ಸಲ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೂ ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಿರಲಿಲ್ಲ.
ಹೀಗಾಗಿ ಶಾಲಾ ಆರಂಭದ ಮೊದಲ ದಿನವೇ ಪೋಷಕರು ಶಾಲಾ ಆವರಣದಲ್ಲಿ ಟೆಂಟ್ ನಿರ್ಮಿಸಿದ್ದರು. ಈ ಬಗ್ಗೆ ಈಟಿವಿ ಭಾರತ 'ಶಾಲಾ ಕೊಠಡಿಗಳು ಶಿಥಿಲಾವಸ್ಥೆ: ಮೈದಾನದಲ್ಲಿ ಟೆಂಟ್ ಹಾಕಿ ತರಗತಿಗೆ ಪಟ್ಟುಹಿಡಿದ ಗ್ರಾಮಸ್ಥರು' ಎಂಬ ಶೀರ್ಷಿಕೆಯಡಿ ವರದಿ ಬಿತ್ತರಿಸಿತ್ತು. ಇದೀಗ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ದುರಸ್ತಿಗೆ ವಿಶೇಷ ಅನುದಾನ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಶಾಲಾ ಕೊಠಡಿಗಳು ಶಿಥಿಲಾವಸ್ಥೆ: ಮೈದಾನದಲ್ಲಿ ಟೆಂಟ್ ಹಾಕಿ ತರಗತಿಗೆ ಪಟ್ಟುಹಿಡಿದ ಗ್ರಾಮಸ್ಥರು