ಬೆಳಗಾವಿ : ಕುಂದಾನಗರಿಯಲ್ಲಿಂದು ಮಿಂಚಿನ ದಾಳಿ ನಡೆಸಿರುವ ಸಿಬಿಐ ಅಧಿಕಾರಿಗಳು ₹5 ಲಕ್ಷ ಲಂಚ ಪಡೆಯುತ್ತಿದ್ದ ಮೂವರು ಜಿಎಸ್‌ಟಿ ಅಧಿಕಾರಿಗಳನ್ನು ಬಂಧಿಸಿದ್ದಾರೆ.
ಬೆಳಗಾವಿಯ ಜಿಎಸ್‌ಟಿ ಅಧೀಕ್ಷಕ ಸುರೇಶ್ ಜಡಗಿ, ಜಿಎಸ್‌ಟಿ ಇನ್ಸ್‌ಪೆಕ್ಟರ್‌ಗಳಾದ ವೈಭವ್ ಗೋಯಲ್, ಮೋಹನಕುಮಾರ್ ಬಂಧಿತರು. ಉದ್ಯಮಿ ರಾಜಾಲಕ್ಷ್ಮಣ ಅವರು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಬೋರಗಾಂವ ಗ್ರಾಮದಲ್ಲಿ ಆರ್‌ಪಿ ಪ್ರೊಡಕ್ಷನ್ಸ್ ಹೆಸರಲ್ಲಿ ಫ್ಯಾಕ್ಟರಿ ನಡೆಸುತ್ತಿದ್ದಾರೆ.
ಸೆ.12ರಂದು ದೂರುದಾರನ ಫ್ಯಾಕ್ಟರಿಗೆ ಭೇಟಿ ನೀಡಿದ ಈ ಮೂವರು 20 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಪಾನ್ ಮಸಾಲಾ ಉದ್ಯಮಿ ರಾಜಾಲಕ್ಷ್ಮಣ ಪಾಚಾಪುರೆ ಅವರು ಸೆ.21ರಂದು ಬೆಂಗಳೂರಿನ ಸಿಬಿಐ ಅಧಿಕಾರಿಗಳಿಗೆ ದೂರು ನೀಡಿದ್ದರು.
₹5 ಲಕ್ಷ ಹಣ ಪಡೆಯುತ್ತಿದ್ದ ಮೂವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿರುವ ಸಿಬಿಐ ಅಧಿಕಾರಿಗಳು, ಧಾರವಾಡದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸೆ.30ರವರೆಗೂ ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ ಹೊರಡಿಸಿದೆ.