ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಶತಕದ ಗಡಿ ದಾಟಿದೆ. ದೆಹಲಿಯಿಂದ ಮರಳಿದ್ದ ತಬ್ಲಿಘಿಗಳು, ಅಜ್ಮೇರ್ ಯಾತ್ರಾರ್ಥಿಗಳ ಬಳಿಕ ಇದೀಗ ಕುಂದಾನಗರಿಗೆ ಮುಂಬೈ ಕೊರೊನಾ ಲಿಂಕ್ ತಟ್ಟಿದೆ ಎನ್ನುವ ಆತಂಕ ಮನೆಮಾಡಿದೆ. ಗರ್ಭಿಣಿಯೊಬ್ಬಳು ಸೋಂಕು ಹಚ್ಚಿಕೊಂಡು ನಗರ ಪ್ರವೇಶಿಸಿರುವುದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಬೆಳಗಾವಿಯ ಸದಾಶಿವ ನಗರದ ಗರ್ಭಿಣಿಯೊಬ್ಬಳು ಮುಂಬೈನಲ್ಲಿ ಪತಿಯೊಂದಿಗೆ ನೆಲೆಸಿದ್ದರು. ಮೇ 5 ರಂದು ಅನುಮತಿ ಪತ್ರ ಇಲ್ಲದೇ ನಿಪ್ಪಾಣಿ ಸಮೀಪದ ಕುಗನೊಳ್ಳಿ ಚೆಕ್ಪೋಸ್ಟ್ನಿಂದ ಅಕ್ರಮವಾಗಿ ಗಡಿ ಪ್ರವೇಶಿಸಿದ್ದಾರೆ. ಅಕ್ರಮವಾಗಿ ಪ್ರವೇಶಿಸಿರುವ ಜೊತೆಗೆ ಹೋಮ್ ಕ್ವಾರಂಟೈನ್‍ಲ್ಲಿರದೇ ಎಲ್ಲೆಂದರಲ್ಲಿ ಓಡಾಡಿದ್ದಾರೆ. ನಿನ್ನೆಯಷ್ಟೇ ಗರ್ಭಿಣಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಆಕೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ 44 ಜನರನ್ನು ಜಿಲ್ಲಾಡಳಿತದಿಂದ ಕ್ವಾರಂಟೈನ್ ಮಾಡಲಾಗಿದೆ. ಗರ್ಭಿಣಿಯ ಟ್ರಾವೆಲ್ ಹಿಸ್ಟರಿ ಕೂಡ ಆತಂಕ ಮೂಡಿಸುವಂತಿದೆ. ಅಲ್ಲದೇ ಅಕ್ರಮ ಗಡಿ ಪ್ರವೇಶಕ್ಕೆ ಸಹಕರಿಸಿದ ಪತಿ, ಸಹೋದರ ಹಾಗೂ ಕಾರು ಚಾಲಕನ ವಿರುದ್ಧವೂ ಜಿಲ್ಲಾಡಳಿತ ಕೇಸ್ ದಾಖಲಿಸಿದೆ.
ತಂದೆ ಜತೆಗೆ ನಿತ್ಯ ವಾಕಿಂಗ್!
ಮುಂಬೈನ ಧಾರಾವಿ ಕೊಳಗೇರಿಯಿಂದ ಬೆಳಗಾವಿಗೆ ಮರಳಿದ್ದ 7 ತಿಂಗಳ ಗರ್ಭಿಣಿ ಬೆಳಗಾವಿಗೆ ಬಂದಾಕ್ಷಣ ಹೋಮ್ ಕ್ವಾರಂಟೈನ್ನಲ್ಲಿ ಇರಬೇಕಿತ್ತು. ಆದರೆ ಹಾಗೆ ಮಾಡದೇ ನಿತ್ಯ ಸದಾಶಿವ ನಗರದಿಂದ ಗಲ್ಫ್ ಗ್ರೌಂಡ್‍ವರೆಗೆ ತಂದೆಯ ಜತೆಗೆ ವಾಕಿಂಗ್ ಮಾಡಿದ್ದಾರೆ. ಅಲ್ಲದೇ ಕುಟುಂಬ ಸದಸ್ಯರ ಜತೆ, ನೆರೆ ಮನೆಯವರ ಜತೆಗೂ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ. ವಿಪರ್ಯಾಸವೆಂದರೆ ಗರ್ಭಿಣಿ, ನಗರದ ಖಾಸಗಿ ಆಸ್ಪತ್ರೆಗೂ ಭೇಟಿ ನೀಡಿದ್ದಾರೆ. ಮುಂಬೈನಿಂದ ಮರಳಿರುವುದಾಗಿ ಹೇಳುತ್ತಿದ್ದಂತೆ ಆಸ್ಪತ್ರೆ ಸಿಬ್ಬಂದಿ ಕೋವಿಡ್ ಟೆಸ್ಟ್ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ತಕ್ಷಣವೇ ಸಿವಿಲ್ ಆಸ್ಪತ್ರೆಗೆ ತೆರಳಿದ್ದ ಗರ್ಭಿಣಿಗೆ ಅಲ್ಲಿನ ಸಿಬ್ಬಂದಿ ಜನರಲ್ ಚೆಕ್‍ಅಪ್ ಮಾಡಿ ಹೋಮ್ ಕ್ವಾರಂಟೈನಲ್ಲಿ ಇರುವಂತೆ ತಿಳಿಸಿದ್ದಾರೆ.
ಒಂದೆರಡು ದಿನಗಳ ಬಳಿಕ ಸಂಶಯಗೊಂಡ ಕುಟುಂಬಸ್ಥರು ವೈದ್ಯಾಧಿಕಾರಿಗಳ ಗಮನಕ್ಕೆ ತಂದು ಕೋವಿಡ್-19 ಟೆಸ್ಟ್ ಮಾಡಿಸಿದ್ದಾರೆ. ಆಗ ಗರ್ಭಿಣಿಗೆ ಪಾಸಿಟಿವ್ ಇರುವುದು ದೃಢಪಟ್ಟಿದೆ. ಅಷ್ಟರೊಳಗೆ ಗರ್ಭಿಣಿ 15 ಜನರ ಜತೆಗೆ ಪ್ರಾಥಮಿಕ ಸಂಪರ್ಕ ಹಾಗೂ 29 ಜನರ ಜತೆಗೆ ದ್ವಿತೀಯ ಸಂಪರ್ಕ ಹೊಂದಿದ್ದರು. ಈ ಎಲ್ಲರ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳಿಸಲು ಜಿಲ್ಲಾಡಳಿತ ನಿರ್ಧರಿಸಿದ್ದು, ಟ್ರಾವೆಲ್ ಹಿಸ್ಟರಿ ಆಧರಿಸಿ ಉಳಿದವರಿಗೆ ಜಿಲ್ಲಾಡಳಿತ ಹುಡುಕಾಟ ನಡೆಸುತ್ತಿದೆ.
ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಜಿಲ್ಲೆಯ 90 ಜನ ತಬ್ಲಿಘಿಗಳು ಪಾಲ್ಗೊಂಡಿದ್ದರು. ಈ ಎಲ್ಲರ ಪೈಕಿ ಜಿಲ್ಲೆಯಲ್ಲಿ 14 ಜನರಿಗೆ ಸೋಂಕು ಕಾಣಿಸಿಕೊಂಡಿತ್ತು. ಈ 14 ಜನರ ಸಂಪರ್ಕ ಬಂದಿದ್ದ ಜಿಲ್ಲೆಯ 83 ಜನರಿಗೂ ಕೊರೊನಾ ಸೋಂಕು ದೃಢಪಟ್ಟಿತ್ತು. ಇದರಲ್ಲಿ ಹಲವರು ಗುಣಮುಖರಾಗಿದ್ದು, ಇನ್ನು ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಾದ ಬಳಿಕ ರಾಜಸ್ಥಾನದ ಅಜ್ಮೇರ್ ಪ್ರವಾಸ ಕೈಗೊಂಡಿದ್ದ 35 ಜನರ ಪೈಕಿ 30 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಜಿಲ್ಲಾಡಳಿತದ ಸಮಯ ಪ್ರಜ್ಞೆಯಿಂದ ಈ ಎಲ್ಲರನ್ನು ನಿಪ್ಪಾಣಿ ಸಮೀಪದ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಹೀಗಾಗಿ ಇವರಿಂದ ಇತರರಿಗೆ ಸೋಂಕು ಹರಡಲಿಲ್ಲ. ಇನ್ನು ಮುಂಬೈನಿಂದ ಬಂದಿರುವ ಗರ್ಭಿಣಿಗೆ ಸೋಂಕು ತಗುಲಿದ್ದು, ಕುಂದಾನಗರಿಯಲ್ಲಿ ಆತಂಕ ಹೆಚ್ಚಿಸಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 114 ಸೋಂಕಿತರಿದ್ದಾರೆ.