ಬೆಳಗಾವಿ: ಸಿಮೆಂಟ್, ಸ್ಟೀಲ್ ದಂಧೆಯಲ್ಲಿ ಹೆಚ್ಚಿನ ಲಾಭ ಬರುತ್ತೆ ಎಂದು ನೂರಾರು ಕೋಟಿ ವಂಚಿಸಿ ಕರ್ನಾಟಕ, ಮಹಾರಾಷ್ಟ್ರ ಪೊಲೀಸರಿಗೆ ಬೇಕಾಗಿದ್ದ ಮಹಾವಂಚಕನನ್ನು ಬೆಳಗಾವಿ ಸಿಸಿಬಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಚಿಕ್ಕೋಡಿ ತಾಲೂಕಿನ ಸದಲಗಾ ಗ್ರಾಮದ ಶಿವಾನಂದ ಕುಂಬಾರ ಬಂಧಿತ ಆರೋಪಿ. ಮಹಾರಾಷ್ಟ್ರದ ಇಚಲಕರಂಜಿಯಲ್ಲಿ ವಾಸವಾಗಿದ್ದ. ಸಿಮೆಂಟ್, ಸ್ಟೀಲ್ ವ್ಯವಹಾರದಲ್ಲಿ ಹೆಚ್ಚಿನ ಲಾಭ ಬರುತ್ತೆ ಅಂತಾ ಜನರಿಂದ ಕೋಟ್ಯಂತರ ರೂ. ಪಡೆದಿದ್ದ. ಹಣ ಹೂಡಿಕೆ ಮಾಡಿದವರಿಗೆ ಮೊದಲಿಗೆ ಹೆಚ್ಚಿನ ಲಾಭಾಂಶ ನೀಡಿ ನಂಬಿಸಿದ್ದ. ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ವಿವಿಧ ಉದ್ಯಮಿಗಳ ಬಳಿ ಅಂದಾಜು 500 ಕೋಟಿಗೂ ಅಧಿಕ ಹಣ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದ.
ಬೆಳಗಾವಿಯ ಯಲ್ಲಪ್ಪ ಮನಗುತಕರ್ ಎಂಬುವರ ಮೂಲಕ ಆರೋಪಿ ಜನರಿಂದ ಹಣ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದ. ಜಾಫರವಾಡಿಯ ಅರ್ಜುನ್ ಪಾಟೀಲ್ ಎಂಬವರು 75 ಲಕ್ಷ ಹಣ ಹೂಡಿಕೆ ಮಾಡಿದ್ದರು. ಹಣ ವಾಪಸ್ ನೀಡದಿದ್ದಾಗ ಬೆಳಗಾವಿ ಸಿಇಎನ್ ಠಾಣೆಯಲ್ಲಿ ಯಲ್ಲಪ್ಪ ಮನಗುತಕರ್, ಶಿವಾನಂದ ಕುಂಬಾರ ವಿರುದ್ಧ ಅರ್ಜುನ್ ಪಾಟೀಲ್ ದೂರು ನೀಡಿದ್ದರು.
ಮುಂಬೈನಲ್ಲಿ ಸೆರೆ: ಪ್ರಕರಣ ದಾಖಲಿಸಿಕೊಂಡ ಬೆಳಗಾವಿ ಸಿಇಎನ್ ಪೊಲೀಸರು, ಅಪರಾಧ ವಿಭಾಗದ ಎಸಿಪಿ ನಾರಾಯಣ ಭರಮಣಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ವಿದೇಶಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಈಜಿಪ್ಟ್, ಮಾಲ್ಡೀವ್ಸ್, ದುಬೈನಲ್ಲಿ ಹುಡುಕಾಡಲಾಗಿತ್ತು. ಬಳಿಕ ನೇಪಾಳದಲ್ಲಿ ಅಡಗಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು.
ನೇಪಾಳ ಪೊಲೀಸರನ್ನು ಇಂಟರ್‌ಪೋಲ್, ಧೂತಾವಾಸ ಮೂಲಕ ಬೆಳಗಾವಿ ಪೊಲೀಸರು ಸಂಪರ್ಕಿಸಿದ್ದರು. ಈ ವೇಳೆ, ವಂಚಕ ಶಿವಾನಂದ ಹಣಕ್ಕಾಗಿ ಮುಂಬೈಗೆ ಬರುವ ಬಗ್ಗೆ ಮಾಹಿತಿ ಬಂದಿತ್ತು. ಈ ಮಾಹಿತಿ ಮೇರೆಗೆ ಮುಂಬೈಗೆ ತೆರಳಿ ವಂಚಕ ಶಿವಾನಂದ ಕುಂಬಾರನನ್ನು ಬಂಧಿಸಲಾಗಿದೆ. ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್ ನಿಂಗನಗೌಡ ಪಾಟೀಲ್ ಮತ್ತು ಟೀಮ್ ಭಾಗಿಯಾಗಿತ್ತು.
ಕಾರು ಚಾಲಕ ಕೋಟ್ಯಧಿಪತಿ: ಮಹಾರಾಷ್ಟ್ರದ ಜಂಗಲಿ ಮಹಾರಾಜ ಆಶ್ರಮದಲ್ಲಿ ಕಾರು ಚಾಲಕನಾಗಿ ಕೆಲಸ ಮಾಡ್ತಿದ್ದ ಶಿವಾನಂದ ಕುಂಬಾರ್, 2009ರಲ್ಲಿ ಮಹಾರಾಷ್ಟ್ರದಲ್ಲಿ ಕಡಿಮೆ ದರದಲ್ಲಿ ಸ್ಟೀಲ್ ಮತ್ತು ಸಿಮೆಂಟ್ ನೀಡುವ ಯೋಜನೆ ರೂಪಿಸಿ ಮಹಾರಾಷ್ಟ್ರದ ಅಹಮ್ಮದ್ ನಗರದ ಕೋಪರಗಾಂವ್‌ನಲ್ಲಿ ವ್ಯವಹಾರ ಆರಂಭಿಸಿದ್ದ.
ಇದಾದ ಬಳಿಕ ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಸಿಮೆಂಟ್, ಸ್ಟೀಲ್ ಪೂರೈಕೆ ಮಾಡಿದ ಈತ ಪ್ರತಿ ಕಿಲೋ ಸಿಮೆಂಟ್‌ಗೆ 60 ರಿಂದ 70ರೂ ಹಾಗೂ ಪ್ರತಿ ಕಿಲೋ ಕಬ್ಬಿಣಕ್ಕೆ 10ರಿಂದ 20ರೂ ಕಡಿಮೆ ಹಣ ತೆಗೆದುಕೊಳ್ಳುತ್ತಿದ್ದ. ಇದೇ ರೀತಿ ಉದ್ಯಮಿ, ಬಿಲ್ಡರ್ಗಳನ್ನು ವಿಶ್ವಾಸಕ್ಕೆ ಪಡೆದು ಹಣ ಡಬಲ್ ಮಾಡೋದಾಗಿ ನಂಬಿಸುತ್ತಿದ್ದ. ಎಲ್ಲರಿಂದ ಹಣ ಪಡೆದು ಕೋಟ್ಯಂತರ ರೂಪಾಯಿ ಗಳಿಸಿದ್ದ.
ಮಹಾರಾಷ್ಟ್ರದ ಕೋಪರಗಾಂವ್ ಸೇರಿ ವಿವಿಧೆಡೆ ಈತನ ವಿರುದ್ಧ ಕೇಸ್ ದಾಖಲಾಗಿವೆ. ವಂಚಕ ಶಿವಾನಂದ ಕುಂಬಾರ್ನನ್ನು ವಶಕ್ಕೆ ಪಡೆಯಲು ಮಹಾರಾಷ್ಟ್ರ ಪೊಲೀಸರು ಬೆಳಗಾವಿಗೆ ಆಗಮಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರು ಪಡಿಸಿರುವ ಬೆಳಗಾವಿ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಓದಿ: ಪೌರ ಕಾರ್ಮಿಕರು ಇಂದು ಮುಷ್ಕರ ಹಿಂಪಡೆಯುತ್ತಾರೆ: ಸಿಎಂ ಬೊಮ್ಮಾಯಿ