ಚಿಕ್ಕೋಡಿ: ಮನೆಯ ಬೀಗ ಮುರಿದು ಲಕ್ಷಾಂತರ ರೂಪಾಯಿ ವಸ್ತುಗಳನ್ನು ದೋಚುತ್ತಿದ್ದ ಕಳ್ಳರ ಗುಂಪೊಂದನ್ನು ಚಿಕ್ಕೋಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಕೊಲ್ಲಾಪೂರ ಜಿಲ್ಲೆಯ ಲಕ್ಷ್ಮೀ ತೀರ್ಥ ನಗದ ವಿಶಾಲ ನರಸಿಂಗ್ ಶೇರಖಾನೆ (39) ಹಾಗೂ ರಾಜೇಂದ್ರ ನಗರದ ಅಜರುದ್ದಿನ್ ಅರಬ (33) ಬಂಧಿತರು. ಚಿಕ್ಕೋಡಿ ಪಟ್ಟಣ, ಕಬ್ಬೂರ, ನಿಪ್ಪಾಣಿ ನಗರ ಸೇರಿದಂತೆ ಹಲವು ಕಡೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣ ಕುರಿತು ತನಿಖೆ ನಡೆಸಿದ ಪೊಲೀಸರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಗಿಲಿಗೆ ಹಾಕಿದ ಕೀಲಿಯನ್ನು ಮುರಿದು ಬಂಗಾರ, ಬೆಳ್ಳಿ ಆಭರಣ, ನಗದು, ಸೇರಿದಂತೆ ಇತರೆ ವಸ್ತುಗಳನ್ನು ದೋಚುತ್ತಿದ್ದ ಖದೀಮರನ್ನು ಚಿಕ್ಕೋಡಿ ಪೊಲೀಸರು ಬಂಧಿಸಿ ತನಿಖೆ ಆರಂಭಿಸಿದ್ದಾರೆ.
ಇನ್ನು ಬಂಧಿತರಿಂದ 268 ಗ್ರಾಂ ಬಂಗಾರದ ಆಭರಣಗಳು, 200 ಗ್ರಾಂ. ಬೆಳ್ಳಿಯ ಸಾಮಾಗ್ರಿಗಳು, 2 ಕಾರು, 2 ಮೊಬೈಲ್, ಕಬ್ಬಿಣದ ರಾಡ್ಗಳು ಸೇರಿದಂತೆ ಒಟ್ಟಿನಲ್ಲಿ 15,65,100 ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಎಸ್ ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್.ಪಿ ರಾಮ ಅರಸಿದ್ದಿ, ಚಿಕ್ಕೋಡಿಯ ಮಿಥುನುಕುಮಾರ್ ಜಿ. ಕೆ, ಸೇರಿದಂತೆ ಅನೇಕ ಪೊಲೀಸರು ಭಾಗಿಯಾಗಿದ್ದರು.