ಬೆಳಗಾವಿ: ಮಳೆಗಾಲ ಬಂದರೆ ಜಲಪಾತಗಳತ್ತ ಮುಖ ಮಾಡುವ ಪ್ರವಾಸಿಗರು ಮೂರು ರಾಜ್ಯಗಳ ಗಡಿಗೆ ಹೊಂದಿಕೊಂಡಿರೋ ಈ ಚೆಲುವನ್ನ ಕಣ್ಣತ್ತುಂಬಿಕೊಳ್ಳಲು ಹಪಹಪಿಸುತ್ತಾರೆ. ಹಸಿರು ಹಾಸಿಗೆಯ ನಡುವೆ ಕಲ್ಲುಬಂಡೆಗಳಲ್ಲಿ ಧುಮ್ಮಿಕ್ಕಿ ಕೆಳಗೆ ಹಾಲಿನ ನೊರೆಯಂತೆ ಹರಿದು ಬರುತ್ತಿರೋ ಸೌಂದರ್ಯದ ಸೊಬಗಿಗೆ ಪ್ರತಿಯೊಬ್ಬರು ಮೈಮರೆಯುತ್ತಾರೆ. ಅದುವೇ ಪಶ್ಚಿಮ ಘಟ್ಟಗಳ ಸಾಲಿನಲ್ಲಿರೋ ಅಂಬೋಲಿ ಫಾಲ್ಸ್.
ಪಶ್ಚಿಮ ಘಟ್ಟದ ಬೆಟ್ಟಗಳ ಸಾಲಿನಲ್ಲಿರೋ ಈ ಜಲಪಾತದ ವಿಶೇಷ ಅಂದರೆ ಅದು ರಸ್ತೆಗೆ ಹತ್ತಿಕೊಂಡಿದೆ. ಸುಮಾರು 40 ಅಡಿ ಎತ್ತರ ಬೆಟ್ಟದಿಂದ ಜಲಧಾರೆಯಾಗಿ ಭೂಮಿಯನ್ನ ಸ್ಪರ್ಶಿಸುವ ದೃಶ್ಯವೇ ಮನಮೋಹಕ. ಬೆಟ್ಟದಿಂದ ಶುದ್ಧ ಹಾಲು ಬೀಳುತಿರುವಂತೆ ಭಾಸವಾಗುವ ಈ ಜಲಪಾತದ ನೀರು ಬೆಟ್ಟಗಳಲ್ಲಿ ಹರಿದು ಹಿರಣ್ಯಕೇಶಿ ನದಿಗೆ ಸೇರಿಕೊಳ್ಳುವ ದೃಶ್ಯ ನೋಡಲು ಲೆಕ್ಕವಿಲ್ಲದಷ್ಟು ಪ್ರವಾಸಿಗರು ಹರಿದು ಬರುತ್ತಾರೆ.
ಆ ಪೈಕಿ ವಾರಾಂತ್ಯಕ್ಕೆ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಕಾರವಾರ ಸೇರಿ ರಾಜ್ಯದ ನಾನಾ ಭಾಗಗಳಿಂದ ಬರುವ ಪ್ರವಾಸಿಗರ ಸಂಖ್ಯೆಯೇ ಹೆಚ್ಚು. ಅದರಲ್ಲೂ ಕಾಲೇಜು ವಿದ್ಯಾರ್ಥಿಗಳ ನೆಚ್ಚಿನ ತಾಣವಾಗಿರೋ ಅಂಬೋಲಿಗೆ ದ್ವಿಚಕ್ರ ವಾಹನದಲ್ಲಿ ಸಂಚರಿಸುವ ಉತ್ಸಾಹಿ ಯುವಕರ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಾರೆ.
ಈ ಅಂಬೋಲಿ ಜಲಪಾತವೂ ಬೆಳಗಾವಿ ಜಿಲ್ಲೆಯಿಂದ 68 ಕಿ.ಮೀ ದೂರದಲ್ಲಿದೆ. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯದ ಗಡಿಯಲ್ಲಿರೋ ಈ ಅಂಬೋಲಿ ಜಲಪಾತ ಮಹಾರಾಷ್ಟ್ರ ರಾಜ್ಯದ ಸಿಂಧುದುರ್ಗ ಜಿಲ್ಲೆಯ ಸಾವಂತವಾಡಿ ತಾಲೂಕಿನ ಅಂಬೋಲಿ ಗ್ರಾಮದಲ್ಲಿದೆ. ಮೂರು ರಾಜ್ಯದ ವಿವಿಧ ಜಿಲ್ಲೆಗಳ ಪ್ರಕೃತಿ ಪ್ರಿಯರಿಗೆ ಇದೊಂದು ಜಲಪಾತ ಬಹು ಆಕರ್ಷಣೀಯ ತಾಣ.
ಆದರೆ, ಈ ವರ್ಷ ಕೊರೊನಾ ವೈರಸ್ ಕಾರಣ ಈ ಜಲಪಾತಕ್ಕೆ ಹೋಗಲು ಪ್ರವಾಸಿಗರಿಗೆ ನಿಷೇಧವಿದೆ. ಇದರಿಂದಾಗಿ ಜಲಪಾತವೀಗ ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿದೆ. ಪ್ರವಾಸಿಗರನ್ನು ನೆಚ್ಚಿ ಬದುಕುತ್ತಿದ್ದ ಅಲ್ಲಿನ ಕೋತಿಗಳು ಆಹಾರವಿಲ್ಲದೇ ಪರದಾಡುತ್ತಿರೋ ದೃಶ್ಯ ಸಾಮಾನ್ಯವಾಗಿ ಕಾಣ್ತಿದೆ. ಈ ಜಲಪಾತ ಮಹಾರಾಷ್ಟ್ರದ ವೆಂಗುರ್ಲಾ ರಸ್ತೆ ಮಾರ್ಗದಲ್ಲಿ ಇರೋದ್ರಿಂದ ಆ ಮಾರ್ಗದ ಮೂಲಕ ವೆಂಗುರ್ಲಾಕ್ಕೆ ಸಂಚರಿಸುವವರು ಅಲ್ಪ ಆಹಾರವನ್ನು ಕೋತಿಗಳಿಗೆ ನೀಡುತ್ತಾರೆ. ಸದ್ಯಕ್ಕೆ ಸಾವಂತವಾಡಿ ತಾಲೂಕಾ ಆಡಳಿತದಿಂದಲ್ಲೂ ಕೋತಿಗಳಿಗೆ ಬಾಳೆ ಹಣ್ಣು ಸೇರಿ, ಇತರ ಆಹಾರಗಳನ್ನು ನೀಡಲಾಗುತ್ತಿದೆ.
ಅಂಬೋಲಿಗೆ ಹೋಗುವುದು ಹೇಗೆ?: ಬೆಳಗಾವಿಯಿಂದ ಅಂಬೋಲಿಗೆ ಹೋಗಬೇಕಾದರೆ ಸಾವಂತವಾಡಿಗೆ ಹೋಗುವ ಕೆಎಸ್‌ಆರ್‌ಟಿಸಿ ಮತ್ತು ಮಹಾರಾಷ್ಟ್ರ ರಾಜ್ಯದ ಬಸ್‌ಗಳಲ್ಲಿ ಅಂಬೋಲಿಗೆ ತಲುಪಬಹುದು. ಅಂಬೋಲಿಯಿಂದ 28 ಕಿ.ಮೀ ದೂರದಲ್ಲಿ ಸಾವಂತವಾಡಿ ರೈಲ್ವೆ ನಿಲ್ದಾಣವಿದೆ. 68 ಕಿ.ಮೀ ದೂರದಲ್ಲಿ ಬೆಳಗಾವಿ ರೈಲು ನಿಲ್ದಾಣ ಮತ್ತು ವಿಮಾನ ನಿಲ್ದಾಣವಿದೆ. ಸ್ವಂತ ಮತ್ತು ಬಾಡಿಗೆ ವಾಹನಗಳಾದರೆ ಒಂದೇ ದಿನದಲ್ಲಿ ಐದಾರು ತಾಣಗಳನ್ನು ನೋಡಬಹುದು.