ಬೆಳಗಾವಿ: ಜಿಲ್ಲೆಯ ಮಚ್ಚೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸರ್ಕಾರ ಜಮೀನು ಸ್ವಾಧೀನಕ್ಕೆ ಮುಂದಾಗಿದೆ. ಫಲವತ್ತಾದ ಜಮೀನು ಸ್ವಾಧೀನಪಡಿಸಬೇಡಿ ಎಂದು ರೈತನೋರ್ವ ತಾನು ಬೆಳೆದ ಬೆಳೆ ಹಿಡಿದು ಸಿಎಂಗೆ ಮನವಿ ಮಾಡಲು ಆಗಿಮಿಸಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿದ್ದಾರೆ. ಇಂದು ಬೆಳಗ್ಗೆ ವಿವಿಧ ಸಂಘಟನೆಗಳ ಮುಖಂಡರ ಭೇಟಿಗಾಗಿ ಸಿಎಂ ಸಮಯ ಮೀಸಲಿಟ್ಟಿದ್ದರು. ಈ ವೇಳೆ ರೈತ ಪ್ರಕಾಶ ಎಂಬುವರು ಮುಖ್ಯಮಂತ್ರಿಗೆ ತೋರಿಸಲೆಂದೇ ತನ್ನ ಜಮೀನಿನಲ್ಲಿ ಬೆಳೆದಿದ್ದ ಬೆಳೆ ತಂದಿದ್ದರು.
ಮಚ್ಚೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸರ್ಕಾರ ಜಮೀನು ಸ್ವಾಧೀನಕ್ಕೆ ಮುಂದಾಗಿದೆ. ಫಲವತ್ತಾದ ಜಮೀನು ಸ್ವಾಧೀನ ಪಡಿಸದಂತೆ ರೈತ ಸಿಎಂಗೆ ಮನವಿ ಮಾಡಲು ಆಗಿಮಿಸಿದ್ದರು. ಮಚ್ಚೆ ಭಾಗದಲ್ಲಿ ಬೆಳೆಯುವ ಇಂದ್ರಾಣಿ ಬಾಸುಮತಿ ಭತ್ತ, ಚನ್ನಂಗಿ ಬೇಳೆ ಸಮೇತ ರೈತ ಸಿಎಂ ಭೇಟಿಗೆ ಆಗಮಿಸಿದ್ದರು. ರೈತ ಪ್ರಕಾಶ ನಾಯಕ ತಂದ ಭತ್ತ ಹಾಗೂ ಚನ್ನಂಗಿ ಬೇಳೆಯನ್ನು ಸರ್ಕ್ಯೂಟ್ ಹೌಸ್ ಗೇಟ್ ಬಳಿ ಪೊಲೀಸರು ಪರಿಶೀಲನೆ ನಡೆಸಿ, ಪ್ರವೇಶಕ್ಕೆ ಅನುಮತಿ ನೀಡಿದರು.
ಏರುಧ್ವನಿಯಲ್ಲಿ ಮಾತನಾಡಿದ ರೈತರು
ಮುಖ್ಯಮಂತ್ರಿ ಬೊಮ್ಮಾಯಿ ರೈತರು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರ ಸಮಸ್ಯೆ ಆಲಿಸಿ ಮನವಿ ಪಡೆದರು. ಈ ವೇಳೆ ಸಿಎಂ ಭೇಟಿಗೆ ರೈತರು ಮುಗಿಬಿದ್ದ ಘಟನೆಯೂ ನಡೆಯಿತು.
ಸಮಸ್ಯೆ ಸರಿಪಡಿಸುತ್ತೇನೆಂದ ಸಿಎಂ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಮನವಿ ಸಲ್ಲಿಸಲು ಆಗಮಿಸಿದ್ದರು. ಈ ಸಂದರ್ಭ ಸಿಎಂ ಜೊತೆ ಕೆಲ ರೈತರು ಏರು ಧ್ವನಿಯಲ್ಲಿ ಮಾತನಾಡಿದರು. ಆ ವೇಳೆ ಆಯ್ತಪ್ಪಾ ಎಲ್ಲ ಸರಿಪಡಿಸ್ತೀನಿ ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದರು.
ಇದನ್ನೂ ಓದಿ: ರಸ್ತೆಗಳಲ್ಲಿ ಬೇಕಾಬಿಟ್ಟಿ ವಾಹನಗಳನ್ನು ನಿಲ್ಲಿಸಿದ್ರೆ ಸೂಕ್ತ ಕ್ರಮ: ಕಮಲ್ ಪಂತ್
ರೈತ ಮುಖಂಡ ರವಿ ಪಾಟೀಲ್, ಸಿಎಂ ಮನವಿ ಸ್ವೀಕರಿಸುತ್ತಿದ್ದಂತೆ ಸೊಯಾಬಿನ್ ದರ ಇಳಿಕೆಗೆ ಪರಿಹಾರ ನೀಡಬೇಕು ಹಾಗೂ ನೆರೆ ಸಂತ್ರಸ್ತರ ಪರಿಹಾರ ನೀಡಬೇಕು ಎಂದು ಪಟ್ಟು ಹಿಡಿದರು. ನಮ್ಮ ಸಮಸ್ಯೆಯನ್ನು ಸ್ವಲ್ಪ ಕೇಳಿ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಎಲ್ಲರ ಸಮಸ್ಯೆ ಬಗೆಹರಿಸುತ್ತೇನೆ ಎಂದು ಸಿಎಂ ಬೊಮ್ಮಾಯಿ ತಾಳ್ಮೆಯಿಂದ ಉತ್ತರ ನೀಡಿ ಅಲ್ಲಿಂದ ತೆರಳಿದರು.