ನವದೆಹಲಿ : ಹೊಸ ರೆಸ್ಟೋರೆಂಟ್ ಪಾರ್ಟನರ್ಗಳ ಅನುಕೂಲಕ್ಕಾಗಿ ಜೊಮಾಟೊ ಪ್ರತಿದಿನ ಪಾವತಿ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಫುಡ್ ಡೆಲಿವರಿ ಪ್ಲಾಟ್ಫಾರ್ಮ್ ಜೊಮಾಟೊ ತನ್ನ ಪಾರ್ಟನರ್ ಹೋಟೆಲುಗಳಿಗೆ ಅವರು ನೀಡಿದ ಆಹಾರದ ಬಿಲ್ಲುಗಳನ್ನು ದೈನಂದಿನ ಆಧಾರದಲ್ಲಿ ಚುಕ್ತಾ ಮಾಡುತ್ತದೆ.
ಪ್ರಸ್ತುತ ತಿಂಗಳಿಗೆ 100 ಅಥವಾ ಅದಕ್ಕಿಂತ ಕಡಿಮೆ ಆರ್ಡರ್ಗಳನ್ನು ಸ್ವೀಕರಿಸುವ ರೆಸ್ಟೋರೆಂಟ್ ಪಾಲುದಾರರಿಗೆ ಈ ವೈಶಿಷ್ಟ್ಯ ಲಭ್ಯ ಇರುತ್ತದೆ ಎಂದು ಕಂಪನಿ ತಿಳಿಸಿದೆ. "ಈಗಿರುವ ವಾರದ ಆಧಾರದಲ್ಲಿ ಪಾವತಿಸುವ ವಿಧಾನದಿಂದ ಸಣ್ಣ ಹೊಟೇಲ್ಗಳು ಸಮಸ್ಯೆ ಎದುರಿಸುವಂತಾಗಿದೆ ಎಂಬ ವಿಷಯ ವಿವಿಧ ರೆಸ್ಟೋರೆಂಟ್ ಪಾಲುದಾರರೊಂದಿಗಿನ ಚರ್ಚೆಗಳ ಸಮಯದಲ್ಲಿ ಕಂಡು ಬಂದಿದೆ. ಹೀಗಾಗಿ ನಿರಂತರ ಆದಾಯ ಬರುವಂತೆ ಮಾಡುವ ನಿಟ್ಟಿನಲ್ಲಿ ಹೊಸ ವೈಶಿಷ್ಟ್ಯವನ್ನು ವಿನ್ಯಾಸಗೊಳಿಸಲಾಗಿದೆ" ಎಂದು ಜೊಮಾಟೊ ಬ್ಲಾಗ್ ಪೋಸ್ಟ್ನಲ್ಲಿ ತಿಳಿಸಿದೆ.
ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೇ ದೈನಂದಿನ ಆಧಾರದಲ್ಲಿ ಪಾವತಿ ಪಡೆಯುವುದು ಇನ್ನು ಹೊಟೇಲುಗಳಿಗೆ ಸುಲಭವಾಗಲಿದೆ. ಆಸಕ್ತ ರೆಸ್ಟೋರೆಂಟ್ ಪಾಲುದಾರರು ಜೊಮಾಟೊ ರೆಸ್ಟೋರೆಂಟ್ ಪಾರ್ಟನರ್ ಅಪ್ಲಿಕೇಶನ್ನ ಪಾವತಿ ವಿಭಾಗದ ಮೂಲಕ ದೈನಂದಿನ ಪಾವತಿ ಆಯ್ಕೆಯನ್ನು ಆರಿಸಿಕೊಳ್ಳಬಹುದು.
ಏತನ್ಮಧ್ಯೆ ಜೊಮಾಟೊ ತನ್ನ ಕಡ್ಡಾಯ ಪ್ಲಾಟ್ಫಾರ್ಮ್ ಶುಲ್ಕವನ್ನು ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತಿ ಆರ್ಡರ್ಗೆ 3 ರೂ.ಗಳಿಂದ 4 ರೂ.ಗೆ ಹೆಚ್ಚಿಸಿದೆ. ಹೊಸ ದರಗಳು ಜನವರಿ 1 ರಿಂದ ಜಾರಿಗೆ ಬಂದಿವೆ. ಹೊಸ ವರ್ಷದ ಮುನ್ನಾದಿನದಂದು ಜೊಮಾಟೊ ತನ್ನ ಪ್ಲಾಟ್ಫಾರ್ಮ್ ಶುಲ್ಕವನ್ನು ತಾತ್ಕಾಲಿಕವಾಗಿ ಕೆಲ ಮಾರುಕಟ್ಟೆಗಳಲ್ಲಿ ಪ್ರತಿ ಆರ್ಡರ್ಗೆ 9 ರೂ.ಗೆ ಹೆಚ್ಚಿಸಿತ್ತು.
2023 ರಲ್ಲಿ ತನ್ನ ಅನೇಕ ಜಾಗತಿಕ ಅಂಗಸಂಸ್ಥೆಗಳನ್ನು ಮುಚ್ಚಿದ ನಂತರ, ಜೊಮಾಟೊದ ಪುನರ್ ರಚನೆ ಪ್ರಯತ್ನಗಳು 2024 ರಲ್ಲಿಯೂ ಮುಂದುವರೆದಿವೆ. ವಿಯೆಟ್ನಾಂನಲ್ಲಿರುವ ಜೊಮಾಟೊ ಲಿಮಿಟೆಡ್ನ ಸ್ಟೆಪ್ - ಡೌನ್ ಅಂಗಸಂಸ್ಥೆಯಾದ ಜೊಮಾಟೊ ವಿಯೆಟ್ನಾಂ ಕಂಪನಿ ಲಿಮಿಟೆಡ್ (ಝಡ್ವಿಸಿಎಲ್) ದಿವಾಳಿ ಪ್ರಕ್ರಿಯೆ ಪ್ರಾರಂಭಿಸಿದೆ ಎಂದು ಕಂಪನಿ ಜನವರಿ 4 ರಂದು ಎಕ್ಸ್ಚೇಂಜ್ ಫೈಲಿಂಗ್ನಲ್ಲಿ ತಿಳಿಸಿದೆ. ಕಂಪನಿಯ ಒಟ್ಟು ವಹಿವಾಟಿಗೆ ಝಡ್ವಿಸಿಎಲ್ ಕೊಡುಗೆ ಶೂನ್ಯ ಎಂದು ಜೊಮಾಟೊ ಫೈಲಿಂಗ್ನಲ್ಲಿ ಉಲ್ಲೇಖಿಸಿದೆ.
ಲಾಭದಾಯಕತೆಯನ್ನು ಸಾಧಿಸುವತ್ತ ಹೆಚ್ಚಿನ ಗಮನ ಹರಿಸುತ್ತಿರುವ ಜೊಮಾಟೊ ಕಳೆದ ವರ್ಷ ತನ್ನ ವ್ಯವಹಾರದ ಅನೇಕ ವಿಭಾಗಗಳನ್ನು ಸುವ್ಯವಸ್ಥಿತಗೊಳಿಸಿತು. ಇದರ ಅಂಗವಾಗಿ ಇಂಡೋನೇಷ್ಯಾ, ಜೋರ್ಡಾನ್, ಜೆಕ್ ಗಣರಾಜ್ಯ ಮತ್ತು ಸ್ಲೋವಾಕಿಯಾ ಸೇರಿದಂತೆ ಅನೇಕ ದೇಶಗಳಲ್ಲಿ ತನ್ನ ವ್ಯವಹಾರವನ್ನು ನಿಲ್ಲಿಸಿದೆ.
ಇದನ್ನೂ ಓದಿ : ಗುಜರಾತ್ನಲ್ಲಿ ಸೆಮಿಕಂಡಕ್ಟರ್ ಚಿಪ್ ಘಟಕ ಆರಂಭಿಸಲಿದೆ ಟಾಟಾ ಗ್ರೂಪ್