ಬೆಂಗಳೂರು: ಆಂತರಿಕ ಮೌಲ್ಯಮಾಪನ ಪರೀಕ್ಷೆಗಳಲ್ಲಿ (internal assessment tests) ಕಳಪೆ ಪ್ರದರ್ಶನ ನೀಡಿದ 400ಕ್ಕೂ ಹೆಚ್ಚು ಹೊಸ ಉದ್ಯೋಗಿಗಳನ್ನು ಐಟಿ ದೈತ್ಯ ವಿಪ್ರೋ ವಜಾಗೊಳಿಸಿದೆ. ವಜಾಗೊಂಡ ಎಲ್ಲ ಉದ್ಯೋಗಿಗಳಿಗೆ ಕಂಪನಿಯು ವಜಾಗೊಳಿಸುವ ಪತ್ರಗಳನ್ನು ನೀಡಿದೆ ಮತ್ತು ಸಾಕಷ್ಟು ತರಬೇತಿಯ ಹೊರತಾಗಿಯೂ ಅವರು ಕಾರ್ಯನಿರ್ವಹಿಸಲು ವಿಫಲರಾಗಿದ್ದಾರೆ ಎಂದು ಹೇಳಿದೆ. ಉದ್ಯೋಗಿಗಳು ತರಬೇತಿ ವೆಚ್ಚದ 75,000 ರೂ.ಗಳನ್ನು ಪಾವತಿಸಲು ಹೊಣೆಗಾರರಾಗಿದ್ದಾರೆ ಎಂದು ವಜಾ ಪತ್ರದಲ್ಲಿ ತಿಳಿಸಲಾಗಿದೆ. ಆದಾಗ್ಯೂ ಈ ಮೊತ್ತವನ್ನು ಕಂಪನಿ ಮನ್ನಾ ಮಾಡಿದೆ ಎಂದು ಹೇಳಲಾಗಿದೆ.
ನೀವು ಪಾವತಿಸಬೇಕಾದ 75,000 ರೂಪಾಯಿಗಳ ತರಬೇತಿ ವೆಚ್ಚವನ್ನು ಮನ್ನಾ ಮಾಡಲಾಗುವುದು ಎಂದು ನಾವು ನಿಮಗೆ ತಿಳಿಸಲು ಬಯಸುತ್ತೇವೆ ಎಂದು ಪತ್ರದಲ್ಲಿ ಬರೆಯಲಾಗಿದೆ. ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ವಿಪ್ರೊ, ತನ್ನ ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತಿರುವುದಕ್ಕಾಗಿ ಕಂಪನಿ ಹೆಮ್ಮೆಪಡುತ್ತದೆ ಎಂದು ಸ್ಪಷ್ಟಪಡಿಸಿದೆ. ಕೆಲಸದ ಪ್ರತಿಯೊಂದು ಹಂತದಲ್ಲಿ ಉದ್ಯೋಗಿಯಿಂದ ಅವರಿಗೆ ಗೊತ್ತುಪಡಿಸಿದ ಕ್ಷೇತ್ರದಲ್ಲಿ ಒಂದು ನಿರ್ದಿಷ್ಟ ಮಟ್ಟದ ಪ್ರಾವೀಣ್ಯತೆಯನ್ನು ನಿರೀಕ್ಷಿಸಲಾಗಿದೆ. ಮೌಲ್ಯಮಾಪನ ಪ್ರಕ್ರಿಯೆಯು ಗ್ರಾಹಕರ ಅಗತ್ಯತೆಗಳು ಮತ್ತು ಸಂಸ್ಥೆಯ ವ್ಯಾಪಾರ ಉದ್ದೇಶಗಳೊಂದಿಗೆ ಉದ್ಯೋಗಿಗಳನ್ನು ಒಟ್ಟುಗೂಡಿಸುತ್ತದೆ. ಈ ಮೌಲ್ಯಮಾಪನ ಪ್ರಕ್ರಿಯೆಯು ವ್ಯವಸ್ಥಿತ ಮತ್ತು ಸಮಗ್ರವಾಗಿದ್ದು, ಕಂಪನಿಯಿಂದ ಉದ್ಯೋಗಿಗಳ ಮಾರ್ಗದರ್ಶನ, ಮರು ತರಬೇತಿ ಮತ್ತು ಪ್ರತ್ಯೇಕತೆಯಂತಹ ಕ್ರಮಗಳ ಸರಣಿಯನ್ನು ಅನುಸರಿಸುತ್ತದೆ ಎಂದು ಕಂಪನಿ ಹೇಳಿದೆ.
ಭಾರತ ಸೇರಿದಂತೆ ಜಗತ್ತಿನಾದ್ಯಂತ ಜನವರಿಯಲ್ಲಿ ಸರಾಸರಿ ಪ್ರತಿದಿನ ಸುಮಾರು 3,000 ತಂತ್ರಜ್ಞಾನ ವಲಯದ ಉದ್ಯೋಗಿಗಳನ್ನು ವಜಾ ಮಾಡಲಾಗುತ್ತಿದೆ. ಮೈಕ್ರೋಸಾಫ್ಟ್ ಮತ್ತು ಗೂಗಲ್‌ನಂತಹ ಹೆಚ್ಚಿನ ದೈತ್ಯ ಟೆಕ್ ಕಂಪನಿಗಳು ಕೂಡ ಉದ್ಯೋಗಿಗಳನ್ನು ಕಡಿತ ಮಾಡುತ್ತಿವೆ. ವಿಶ್ವದಾದ್ಯಂತ ಆರ್ಥಿಕ ಹಿಂಜರಿತದ ಬಗ್ಗೆ ಕಳವಳ ಹೆಚ್ಚಾದಂತೆ ಉದ್ಯೋಗ ಕಡಿತಗಳ ಸಂಖ್ಯೆಯೂ ಹೆಚ್ಚಾಗಿದೆ. 166 ಐಟಿ ಕಂಪನಿಗಳು ಇದುವರೆಗೆ 65,000 ಕ್ಕೂ ಹೆಚ್ಚು ಕಾರ್ಮಿಕರನ್ನು ವಜಾಗೊಳಿಸಿವೆ.
ಗೂಗಲ್‌ನ ಮಾತೃ ಕಂಪನಿಯಾದ ಆಲ್ಫಾಬೆಟ್, 12,000 ಜನರನ್ನು ಅಥವಾ ಕಂಪನಿಯ ಒಟ್ಟು ಶೇಕಡಾ 6 ರಷ್ಟು ಜನರನ್ನು ವಜಾಗೊಳಿಸಲಾಗುವುದು ಎಂದು ಹೇಳಿದೆ. ಈ ತ್ರೈಮಾಸಿಕದ ಕೊನೆಯ ಹೊತ್ತಿಗೆ ಮೈಕ್ರೊಸಾಫ್ಟ್ 10 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲಿದೆ ಎಂದು ಮೈಕ್ರೋಸಾಫ್ಟ್ ಅಧ್ಯಕ್ಷ ಮತ್ತು ಸಿಇಒ ಸತ್ಯ ನಾಡೆಲ್ಲಾ ಕಳೆದ ವಾರ ಹೇಳಿದ್ದಾರೆ. ಈ ವರ್ಷದ ಆರಂಭದಲ್ಲಿ, ಅಮೆಜಾನ್ ಭಾರತದಲ್ಲಿ ಸರಿಸುಮಾರು 1,000 ಸೇರಿದಂತೆ ವಿಶ್ವದಾದ್ಯಂತ 18,000 ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಹೇಳಿದೆ. 2022 ರಲ್ಲಿ 154,336 ಉದ್ಯೋಗಿಗಳನ್ನು 1,000 ಕ್ಕೂ ಹೆಚ್ಚು ಸಂಸ್ಥೆಗಳು ಬಿಟ್ಟುಕೊಟ್ಟಿವೆ ಎಂದು ಮೂಲಗಳು ತಿಳಿಸಿವೆ.
ಫೇಸ್ಬುಕ್ ಒಡೆತನ ಹೊಂದಿರುವ ಮೆಟಾ ಸ್ಥಾಪನೆಯಾದ ನಂತರ ಮೊದಲ ಬಾರಿಗೆ, ನವೆಂಬರ್ 2022 ರಲ್ಲಿ 11,000 ಕಾರ್ಮಿಕರನ್ನು ವಜಾಗೊಳಿಸುವುದಾಗಿ ಘೋಷಿಸಿದೆ. ಇದು ಅದರ ಉದ್ಯೋಗಿಗಳ ಸುಮಾರು ಶೇಕಡಾ 13 ರಷ್ಟು ಆಗಿದೆ. ಕಂಪನಿಯು WhatsApp, Facebook ಮತ್ತು Instagram ಸೇರಿದಂತೆ ತನ್ನ ವ್ಯವಹಾರಗಳಾದ್ಯಂತ ಉದ್ಯೋಗಿಗಳನ್ನು ವಜಾಗೊಳಿಸುವ ನಿರೀಕ್ಷೆಯಿದೆ ಎಂದು ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ. ಕಂಪನಿಯು ಮುಂಬರುವ ವರ್ಷಕ್ಕೆ ನೇಮಕಾತಿಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸುತ್ತಿದೆ.
ಇದನ್ನೂ ಓದಿ: 'ಟೆಕ್ ಕಂಪನಿಗಳು ಡಿಜಿಟಲ್ ಸುದ್ದಿ ಪಬ್ಲಿಷರ್ಗಳೊಂದಿಗೆ ಆದಾಯ ಹಂಚಿಕೊಳ್ಳಲಿ'