ಸ್ಯಾನ್ಫ್ರಾನ್ಸಿಸ್ಕೋ: ವಿಶ್ವದ ಧನಿಕ ಎಲಾನ್ ಮಸ್ಕ್ ಒಡೆತನದ ಟ್ವಿಟರ್ ಹೊಸ ನಿಯಮಗಳ ಸಂಕೋಲೆಗೆ ಸಿಲುಕಿದೆ. ಮೈಕ್ರೋಬ್ಲಾಗಿಂಗ್ ಜಾಲಾಡಲು ಬಳಕೆದಾರ ಖಾತೆಯನ್ನು ಕಡ್ಡಾಯವಾಗಿ ಹೊಂದಿರಬೇಕು ಎಂಬ ಈಚೆಗಿನ ನಿಯಮವನ್ನು ಕಂಪನಿ ಸದ್ದಿಲ್ಲದೇ ಹಿಂದಕ್ಕೆ ಪಡೆದಿದೆ.
ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಮೂರು ದಿನಗಳ ಹಿಂದಷ್ಟೇ ಪರಿಶೀಲಿಸಿದ ಮತ್ತು ಪರಿಶೀಲಿಸದ ಖಾತೆಗಳ ದಿನದ ವೀಕ್ಷಣೆಗೆ ಇಂತಿಷ್ಟು ಎಂಬಂತೆ ಮಿತಿಯ ನಿಮಯವನ್ನು ಹೇರಿದ್ದರು. ಇದು ಬಳಕೆದಾರರ ಭಾರೀ ಟೀಕೆಗೆ ಗುರಿಯಾಗಿತ್ತು. ಇದಲ್ಲದೇ, ಟ್ವಿಟರ್ ಜಾಲಾಟಕ್ಕೆ ಖಾತೆ ಹೊಂದಿರಬೇಕು. ಖಾತೆ ರಹಿತ ಟ್ವಿಟರ್ ಪ್ರವೇಶಕ್ಕೆ ಅವಕಾಶವಿಲ್ಲ ಎಂಬ ನಿಯಮವನ್ನು ತರಲಾಗಿತ್ತು. ಇದರಿಂದ ಬಳಕೆಯಲ್ಲಿ ಇಳಿಕೆ ಉಂಟಾಗಿದೆ ಎಂದು ಹೇಳಲಾಗಿದೆ.
ಮಿತಿಗಳ ನಿಯಮ ಜಾರಿಯಿಂದಾಗಿ ಟ್ವಿಟರ್ ಬಳಕೆದಾರರ ಅಸಮಾಧಾನ ಹೆಚ್ಚಿದ ಹಿನ್ನೆಲೆಯಲ್ಲಿ ಕಂಪನಿ 'ಕಡ್ಡಾಯ ಖಾತೆ' ನಿಯಮವನ್ನು ಪ್ರಕಟಗೊಳಿಸದೇ ಹಿಂಪಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ನಿಯಮ ಜಾರಿ ವೇಳೆ ಮಾಲೀಕ ಮಸ್ಕ್ ಇದು ತಾತ್ಕಾಲಿಕ ಎಂದು ಹೇಳಿದ್ದರು.
ಬಳಕೆದಾರರ ಡೇಟಾ ಕಳ್ಳತನವನ್ನು ತಡೆಯಲು ತಾತ್ಕಾಲಿಕ ಕ್ರಮವಾಗಿ ಕಡ್ಡಾಯ ಖಾತೆ ನಿಯಮವಿರಲಿದೆ. ಟ್ವಿಟರ್ ಪ್ರವೇಶಿಸುವ ಮುನ್ನ ಖಾತೆಯನ್ನು ಹೊಂದಿರಬೇಕು. ಇದು ಬಳಕೆದಾರರ ಸುರಕ್ಷತೆಗಾಗಿ ತರಲಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದರು. ಇದೀಗ ಟ್ವಿಟರ್ ಲಿಂಕ್ಗಳ ಮೂಲಕ ಖಾತೆ ರಹಿತ ಸೈನ್ಇನ್ ಮಾಡಲು ಅನುಮತಿಸುವ ಕುರಿತು ಕಂಪನಿಯು ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ. ಆದರೆ, ಪರಿಶೀಲಿಸದ ಬಳಕೆದಾರರಿಗೆ ದಿನಕ್ಕೆ 1,000 ಪೋಸ್ಟ್, ಪರಿಶೀಲಿಸಿದ ಬಳಕೆದಾರರಿಗೆ ದಿನಕ್ಕೆ 10,000 ಪೋಸ್ಟ್‌ಗಳನ್ನು ವೀಕ್ಷಿಸುವ ಮಿತಿ ಮುಂದುವರಿಯಲಿದೆ.
ಟ್ವಿಟರ್ಗೆ ಥ್ರೆಡ್ಸ್ ಸವಾಲು: ಟ್ವಿಟರ್ ನಿಯಮಗಳ ಜಂಜಾಟದ ಮಧ್ಯೆ ಮೆಟಾ ಸಂಸ್ಥೆ 'ಥ್ರೆಡ್ಸ್ ಆ್ಯಪ್' ಅನ್ನು ಇಂದು ಬಿಡುಗಡೆ ಮಾಡಿದೆ. ಇದು ಟ್ವಿಟರ್ನ ತದ್ರೂಪಿಯಂತಿದ್ದು, ವಿಶ್ವದ 100 ರಾಷ್ಟ್ರಗಳಲ್ಲಿ ಲಭ್ಯವಿದೆ. ಎಲಾನ್ ಮಸ್ಕ್ ಮೈಕ್ರೋಬ್ಲಾಗಿಂಗ್ ಖರೀದಿ ಮಾಡಿದ ಬಳಿಕ ಭಾರೀ ನಷ್ಟ ಅನುಭವಿಸುತ್ತಿದೆ. ಅದರ ಹೊಸ ಸಿಒಇ ಕಂಪನಿಯನ್ನು ಲಾಭದತ್ತ ಹೊರಳಿಸಲು ಹರಸಾಹಸ ಪಡುತ್ತಿರುವ ನಡುವೆಯೇ ಮೆಟಾ ಸಂಸ್ಥೆ ಥ್ರೆಡ್ಸ್ ಆ್ಯಪ್ ತಂದಿದೆ.
ಬಿಡುಗಡೆಯಾದ ಮೊದಲ ದಿನವೇ ಥ್ರೆಡ್ಸ್ ಆ್ಯಪ್ 7 ಗಂಟೆಗಳಲ್ಲಿ 10 ಮಿಲಿಯನ್ರಷ್ಟು ಸೈನ್ಇನ್ ಕಂಡಿದೆ. ಟ್ವಿಟರ್ ಬಳಕೆದಾರರಿಗಿಂತ ಹೆಚ್ಚು ಸಂಖ್ಯೆಯನ್ನು ಹೊಂದಬೇಕಾದರೆ, ಈಗಿರುವ ಇನ್ಸ್ಟಾಗ್ರಾಮ್ ಬಳಕೆದಾರರ 1/4 ಜನರು ಸೈನ್ಅಪ್ ಆದರೆ ಸಾಕು. ಸದ್ಯ ಜಗತ್ತಿನಲ್ಲಿ ಟ್ವಿಟರ್ ಬಳಕೆದಾರರು 354 ಮಿಲಿಯನ್ ಇದ್ದರೆ, ಇನ್ಸ್ಟ್ರಾಗ್ರಾಮ್ ಬಳಸುವವರು 4.54 ಬಿಲಿಯನ್ ಇದ್ದಾರೆ. ಥ್ರೆಡ್ಸ್ ಲಾಗ್ ಇನ್ ಆಗಲು ಮೆಟಾ ಸಂಸ್ಥೆ ಸರಳಮಾರ್ಗ ನೀಡಿದೆ. ಇನ್ಸ್ಟಾಗ್ರಾಮ್ ಖಾತೆ ಇದ್ದರೆ ಹೊಸ ಆ್ಯಪ್ ಸೈನ್ ಅಪ್ ಆಗಬಹುದು.
ಇದನ್ನೂ ಓದಿ: Threads: ಬಂತು ಟ್ವಿಟರ್ ಮಾದರಿಯ ಥ್ರೆಡ್ಸ್ ಆ್ಯಪ್; ಎಲಾನ್ ಮಸ್ಕ್ಗೆ ಮೆಟಾ ಸವಾಲು