ಮುಂಬೈ : ಜಾಗತಿಕ ಷೇರು ಮಾರುಕಟ್ಟೆಗಳಲ್ಲಿನ ಏರುಗತಿ ಮತ್ತು ಮಾನ್ಸೂನ್‌ನ ಪ್ರಗತಿಯ ಕಾರಣಗಳಿಂದ ಭಾರತೀಯ ಷೇರು ಮಾರುಕಟ್ಟೆ ಹೊಸ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಬಿಎಸ್‌ಇ ಸೆನ್ಸೆಕ್ಸ್ ಶುಕ್ರವಾರ 800 ಅಂಕಗಳಿಗಿಂತ ಹೆಚ್ಚು ಏರಿಕೆಯೊಂದಿಗೆ ಮುಕ್ತಾಯವಾಗಿದೆ. ಧನಾತ್ಮಕ ಜಾಗತಿಕ ಡೇಟಾ, ಅಧಿಕ ಪ್ರಮಾಣದಲ್ಲಿ ಎಫ್‌ಐಐ ಖರೀದಿ ಮತ್ತು ಮಾನ್ಸೂನ್ ಚೇತರಿಕೆಯ ಕಾರಣದಿಂದ ದೇಶೀಯ ಷೇರುಗಳು ಒಂದು ದಿನದ ವಿರಾಮದ ನಂತರ ಮತ್ತೆ ಏರಿಕೆಯತ್ತ ಸಾಗಿದವು.
ನಿಫ್ಟಿ 213 ಪಾಯಿಂಟ್‌ಗಳ (+1.1 ಶೇಕಡಾ) ಏರಿಕೆಯೊಂದಿಗೆ 19,186 ನಲ್ಲಿ ಮುಕ್ತಾಯವಾಯಿತು. ವಿಶಾಲ ಮಾರುಕಟ್ಟೆಯು ನಿಫ್ಟಿ ಮಿಡ್‌ಕ್ಯಾಪ್ 100 ರೊಂದಿಗೆ ಹೊಸ ದಾಖಲೆಯ ಎತ್ತರಕ್ಕೇರಿತು. ಲೋಹಗಳನ್ನು ಹೊರತುಪಡಿಸಿ ಎಲ್ಲಾ ವಲಯಗಳು ಏರಿಕೆಯಲ್ಲಿ ಕೊನೆಗೊಂಡಿವೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವಿಸಸ್‌ನ ರಿಟೇಲ್ ರಿಸರ್ಚ್ ಮುಖ್ಯಸ್ಥ ಸಿದ್ಧಾರ್ಥ ಖೇಮ್ಕಾ ಹೇಳಿದ್ದಾರೆ.
ಬಿಎಸ್‌ಇ ಸೆನ್ಸೆಕ್ಸ್ ದಾಖಲೆಯ 64,718 ಅಂಕಗಳಿಗೆ ಮುಕ್ತಾಯಗೊಂಡಿದ್ದರಿಂದ ಆಟೋ ಮತ್ತು ಐಟಿ ಶೇರುಗಳು ಗಮನ ಸೆಳೆದಿವೆ. ಸೆನ್ಸೆಕ್ಸ್ 64,000 ಮಾರ್ಕ್ ಅನ್ನು ದಾಟಿದ್ದು, ಬಲವಾದ ಜಾಗತಿಕ ಸೂಚನೆಗಳ ಮೇಲೆ ಹೊಸ ಗರಿಷ್ಠ ತಲುಪಿದೆ. ಸೆನ್ಸೆಕ್ಸ್ ಷೇರುಗಳ ಪೈಕಿ ಎಂ & ಎಂ ಶೇ.4.1 ರಷ್ಟು ಲಾಭ ಗಳಿಸಿ ಟಾಪ್ ಪರ್ಫಾರ್ಮರ್ ಆಗಿದೆ. ಇನ್ಫೋಸಿಸ್ ಶೇ 3.2ರಷ್ಟು ಜಿಗಿದಿದ್ದು, ಇಂಡಸ್ ಇಂಡ್ ಬ್ಯಾಂಕ್ ಶೇ 3ರಷ್ಟು ಏರಿಕೆ ಕಂಡಿದೆ. ಸನ್ ಫಾರ್ಮಾ ಶೇ 2.8, ಟಿಸಿಎಸ್ ಶೇ 2.6, ಮಾರುತಿ ಶೇ 2.5 ಮತ್ತು ಎಲ್ ಅಂಡ್ ಟಿ ಶೇ 2.2ರಷ್ಟು ಏರಿಕೆ ಕಂಡಿವೆ.
ಸೆನ್ಸೆಕ್ಸ್ ಹಿಂದಿನ ಮುಕ್ತಾಯದ 63,915.42 ರ ವಿರುದ್ಧ 153 ಪಾಯಿಂಟ್‌ಗಳ ಏರಿಕೆಯೊಂದಿಗೆ 64,068.44 ಕ್ಕೆ ತೆರೆದುಕೊಂಡಿತು ಮತ್ತು ಇಂಟ್ರಾಡೇ ವಹಿವಾಟಿನಲ್ಲಿ 853 ಪಾಯಿಂಟ್‌ಗಳಷ್ಟು ಏರಿಕೆಯಾಗಿ 64,768.58 ರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತು. ನಿಫ್ಟಿ 50 ಇಂಟ್ರಾಡೇ ವಹಿವಾಟಿನಲ್ಲಿ ತನ್ನ ಹೊಸ ದಾಖಲೆಯ 19,201.70 ಅನ್ನು ತಲುಪಿತು.
ಅಂತಿಮವಾಗಿ ಸೆನ್ಸೆಕ್ಸ್ 803 ಅಂಕಗಳು ಅಥವಾ ಶೇಕಡಾ 1.26 ರಷ್ಟು ಏರಿಕೆಯಾಗಿ 64,718.56 ಕ್ಕೆ ಕೊನೆಗೊಂಡರೆ, ನಿಫ್ಟಿ 217 ಪಾಯಿಂಟ್ ಅಥವಾ 1.14 ರಷ್ಟು ಏರಿಕೆಯಾಗಿ 19,189.05 ಕ್ಕೆ ದಿನವನ್ನು ಮುಕ್ತಾಯಗೊಳಿಸಿತು. ಇದು ಸೆನ್ಸೆಕ್ಸ್‌ಗೆ ಸತತ ಮೂರನೇ ಬಾರಿಯ ಏರಿಕೆ ಮತ್ತು ನಿಫ್ಟಿಗೆ ಸತತ ನಾಲ್ಕನೇ ಅವಧಿಯ ಏರಿಕೆಯಾಗಿದೆ.
20,900 ಕೋಟಿ MTD ಯ ಬಲವಾದ ಎಫ್‌ಐಐ ಹರಿವು ಮತ್ತು ಹೂಡಿಕೆದಾರರ ಭಾವನೆಗಳಿಗೆ ಬಲ ನೀಡಿದ ನೈಋತ್ಯ ಮಾನ್ಸೂನ್‌ನ ಆಗಮನದ ಹಿನ್ನೆಲೆಯಲ್ಲಿ ಭಾರತೀಯ ಸೂಚ್ಯಂಕಗಳು ದಾಖಲೆ ಮುರಿಯುವ ಭರಾಟೆಯಲ್ಲಿದ್ದು, ಜೂನ್ ತಿಂಗಳಿಗೆ 3.5 ಶೇಕಡಾ (ನಿಫ್ಟಿ) ಗಳಿಕೆಯೊಂದಿಗೆ ಕೊನೆಗೊಂಡಿವೆ. "ಭಾರತೀಯ ಈಕ್ವಿಟಿಗಳಲ್ಲಿನ ಏರಿಕೆಯು ಮುಂದಿನ ಕೆಲ ದಿನಗಳ ಕಾಲ ಮುಂದುವರಿಯುವ ನಿರೀಕ್ಷೆಯಿದೆ" ಎಂದು ಖೇಮ್ಕಾ ತಿಳಿಸಿದರು.
ಇದನ್ನೂ ಓದಿ : 12 ತಿಂಗಳಲ್ಲಿ 7.6 ಕೋಟಿ ಬಿರಿಯಾನಿ ಆರ್ಡರ್ ಪಡೆದ Swiggy: ಅಗ್ರಸ್ಥಾನದಲ್ಲಿ ಹೈದರಾಬಾದ್!