ಮುಂಬೈ (ಮಹಾರಾಷ್ಟ್ರ): ದೇಶೀಯ ಷೇರುಪೇಟೆ ಸೂಚ್ಯಂಕಗಳು ಸೋಮವಾರ ಲಾಭದೊಂದಿಗೆ ಶುರುವಾಗಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಧನಾತ್ಮಕ ಸಂಕೇತಗಳು ಗೋಚರಿಸಿದ ಕಾರಣ ಮಾರುಕಟ್ಟೆ ಉತ್ತಮವಾಗಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಬೆಳಗ್ಗೆ 9:26ಕ್ಕೆ 430 ಅಂಕಗಳ ಏರಿಕೆಯೊಂದಿಗೆ 61,484ರಲ್ಲಿ ವಹಿವಾಟು ನಡೆಸುತ್ತಿದೆ. ಎನ್‌ಎಸ್‌ಇ ನಿಫ್ಟಿ 116 ಅಂಕಗಳ ಏರಿಕೆ ಕಂಡು 18,185ಕ್ಕೆ ತಲುಪಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 6 ಪೈಸೆ ಏರಿಕೆ ಕಂಡು 81.72ಕ್ಕೆ ತಲುಪಿದೆ.
ಯಾರಿಗೆ ಲಾಭ, ನಷ್ಟ?: ಇಂಡಸ್‌ಇಂಡ್ ಬ್ಯಾಂಕ್, ಪವರ್‌ಗ್ರಿಡ್, ಕೊಟಕ್ ಮಹೀಂದ್ರಾ ಬ್ಯಾಂಕ್, ಟಾಟಾ ಮೋಟಾರ್ಸ್, ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಬಜಾಜ್ ಫೈನಾನ್ಸ್, ಎಂ & ಎಂ, ವಿಪ್ರೋ, ಬಜಾಜ್ ಫಿನ್‌ಸರ್ವ್ ಷೇರುಗಳು ಸೆನ್ಸೆಕ್ಸ್ 30 ಸೂಚ್ಯಂಕದಲ್ಲಿ ಲಾಭದಾಯಕವಾಗಿವೆ. ಸನ್‌ಫಾರ್ಮಾ ಮಾತ್ರ ನಷ್ಟ ಅನುಭವಿಸಿದೆ. ಗಮನಿಸಿ, ಆರಂಭಿಕ ಟ್ರೆಂಡ್ ಆಗಿರುತ್ತದೆ.
ಶುಕ್ರವಾರ ಅಮೆರಿಕದ ಮಾರುಕಟ್ಟೆಗಳು ಭಾರಿ ಲಾಭದೊಂದಿಗೆ ಮುಕ್ತಾಯಗೊಂಡಿವೆ. ಏಪ್ರಿಲ್‌ನಲ್ಲಿ ಹೊಸ ಉದ್ಯೋಗಗಳಲ್ಲಿ ನಿರೀಕ್ಷೆಗಿಂತ ಬಲವಾದ ಹೆಚ್ಚಳ ಕಂಡುಬಂದಿದೆ. ಮತ್ತೊಂದೆಡೆ, ಇತ್ತೀಚಿನ ಮಾರಾಟದೊತ್ತಡದಿಂದ ಬ್ಯಾಂಕಿಂಗ್ ಷೇರುಗಳು ಸಹ ಚೇತರಿಸಿಕೊಂಡವು. ಈ ಬೆಳವಣಿಗೆಗಳಿಂದ ಏಷ್ಯಾ-ಪೆಸಿಫಿಕ್ ಮಾರುಕಟ್ಟೆಗಳು ಇಂದು ಲಾಭದಲ್ಲಿ ವಹಿವಾಟು ನಡೆಸುತ್ತಿವೆ.
ಶುಕ್ರವಾರ ತೈಲ ಬೆಲೆಯಲ್ಲಿ ಅಲ್ಪ ಏರಿಕೆಯಾಗಿದೆ. ಬ್ರೆಂಟ್ ಬ್ಯಾರೆಲ್ ತೈಲ ಬೆಲೆ 75.30 ಡಾಲರ್‌ನಲ್ಲಿ ವಹಿವಾಟು ನಡೆಸಿತು. ವಿದೇಶಿ ಹೂಡಿಕೆದಾರರು ಶುಕ್ರವಾರ 777.68 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಇದೇ ಸಮಯದಲ್ಲಿ, ದೇಶೀಯ ಹೂಡಿಕೆದಾರರು 2,198.77 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರು.
ಗಮನಿಸಬೇಕಾದ ಷೇರುಗಳು:
ಮ್ಯಾನ್‌ಕೈಂಡ್ ಫಾರ್ಮಾ: ಪ್ರಮುಖ ಫಾರ್ಮಾ ಕಂಪನಿ ಮ್ಯಾನ್‌ಕೈಂಡ್ ಫಾರ್ಮಾ ಷೇರುಗಳು ಇಂದು ಮೊದಲ ಬಾರಿಗೆ ಸ್ಟಾಕ್ ಎಕ್ಸ್‌ಚೇಂಜ್‌ಗಳಲ್ಲಿ ಲಿಸ್ಟ್ ಆಗಲಿವೆ.
ಆದಿತ್ಯ ಬಿರ್ಲಾ ಫ್ಯಾಷನ್, ರಿಟೇಲ್, ಟಿಸಿಎನ್ಎಸ್ ಉಡುಪು: ಆದಿತ್ಯ ಬಿರ್ಲಾ ಫ್ಯಾಷನ್ ಮತ್ತು ರಿಟೇಲ್ 1,650 ಕೋಟಿ ರೂ.ಗೆ ಟಿಸಿಎನ್ಎಸ್ ಕ್ಲೋಥಿಂಗ್‌ನಲ್ಲಿ ಶೇಕಡಾ 51 ರಷ್ಟು ಪಾಲು ಪಡೆಯಲು ನಿರ್ಣಾಯಕ ಒಪ್ಪಂದ ಮಾಡಿಕೊಂಡಿದೆ.
SJVS: ಭಾರತದಲ್ಲಿ 100 MW ಪವನ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು SJVS ಗ್ರೀನ್ ಎನರ್ಜಿಯು ಗುಜರಾತ್ ಉರ್ಜಾ ವಿಕಾಸ್ ನಿಗಮದಿಂದ ಆದೇಶ ಸ್ವೀಕರಿಸಿದೆ. ಈ ಯೋಜನೆಯ ಮೌಲ್ಯ 800 ಕೋಟಿ ರೂಪಾಯಿ ಆಗಿದೆ.
ಲುಪಿನ್: ಫ್ರೆಂಚ್ ಫಾರ್ಮಾ ಕಂಪನಿ ಮೆಡಿಸೋಲ್‌ನ ಸಂಪೂರ್ಣ ಷೇರು ಬಂಡವಾಳವನ್ನು ಸ್ವಾಧೀನಪಡಿಸಿಕೊಳ್ಳಲು ಲುಪಿನ್ ಒಪ್ಪಂದ ಮಾಡಿಕೊಂಡಿದೆ. ಇದರ ಮೌಲ್ಯ ರೂ.161.89 ಕೋಟಿ ರೂಪಾಯಿ ಆಗಿದೆ.
ಭಾರತ್ ಫೋರ್ಜ್: ಕೇದಾರ್ ದೀಕ್ಷಿತ್ ಅವರನ್ನು ಮುಖ್ಯ ಹಣಕಾಸು ಅಧಿಕಾರಿಯಾಗಿ ನೇಮಕ ಮಾಡಲು ಭಾರತ್ ಫೋರ್ಜ್ ಮಂಡಳಿಯು ಅನುಮೋದನೆ ನೀಡಿದೆ. ಅವರ ನೇಮಕಾತಿ ಜುಲೈ 1, 2023 ರಿಂದ ಜಾರಿಗೆ ಬರಲಿದೆ.
ಕೋಲ್ ಇಂಡಿಯಾ: ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ 5,527.62 ಕೋಟಿ ರೂ.ಗಳ ನಿವ್ವಳ ಲಾಭವನ್ನು ಏಕೀಕೃತ ಆಧಾರದ ಮೇಲೆ ಪ್ರಕಟಿಸಿದೆ. 2021-22 ರಲ್ಲಿ, ಅದೇ ಅವಧಿಯಲ್ಲಿ ಗಳಿಸಿದ ರೂ.6,715 ಕೋಟಿಗೆ ಹೋಲಿಸಿದರೆ ಲಾಭವು ಶೇಕಡಾ 17.7 ರಷ್ಟು ಕಡಿಮೆಯಾಗಿದೆ. ಉದ್ಯೋಗಿಗಳ ವೇತನ ಪರಿಷ್ಕರಣೆ ಹಿನ್ನೆಲೆ ಲಾಭದಲ್ಲಿ ಕಡಿಮೆ ಆಗಿದೆ.
ಮತ್ತೊಂದೆಡೆ, ಕಳೆದ ಎರಡು ದಿನಗಳ ಹಿಂದೆ ಮಾರ್ಚ್ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿದ ಬ್ರಿಟಾನಿಯಾ, ಅದಾನಿ ಪವರ್, ಮಾರಿಕೊ, ಪೇಟಿಎಂ, ಅಲೆಂಬಿಕ್ ಫಾರ್ಮಾ, ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಡಿಸಿಬಿ ಬ್ಯಾಂಕ್, ಪಿರಮಲ್ ಎಂಟರ್‌ಪ್ರೈಸಸ್, ಬ್ಲೂಡಾರ್ಟ್ ಎಕ್ಸ್‌ಪ್ರೆಸ್, ಒಲೆಕ್ಟ್ರಾ ಗ್ರೀನ್‌ಟೆಕ್ ಮತ್ತು ಅಜಂತಾ ಫಾರ್ಮಾ ಷೇರುಗಳ ಮೇಲೆ ಹೂಡಿಕೆದಾರರು ಗಮನಹರಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ಎಸಿ, ಫ್ರಿಡ್ಜ್, ಕೂಲರ್ ವ್ಯಾಪಾರಕ್ಕೆ ಬ್ರೇಕ್ ಹಾಕಿದ ಅಕಾಲಿಕ ಮಳೆ