ಮುಂಬೈ : ಬ್ಯಾಂಕ್ ಮತ್ತು ಮಾಹಿತಿ ತಂತ್ರಜ್ಞಾನ ವಲಯದ ಷೇರುಗಳು ತೀವ್ರವಾಗಿ ಕುಸಿದಿದ್ದರಿಂದ ಭಾರತೀಯ ಬೆಂಚ್ ಮಾರ್ಕ್ ಷೇರು ಮಾರುಕಟ್ಟೆ ಸೂಚ್ಯಂಕಗಳು ಶುಕ್ರವಾರದ ವಹಿವಾಟಿನಲ್ಲಿ ಇಳಿಕೆಯೊಂದಿಗೆ ಕೊನೆಗೊಂಡವು. ಬಿಎಸ್ಇ ಸೆನ್ಸೆಕ್ಸ್ 125.65 ಪಾಯಿಂಟ್ಸ್ ಕುಸಿದು 66,282.74 ಕ್ಕೆ ತಲುಪಿದ್ದರೆ, ಎನ್ಎಸ್ಇ ನಿಫ್ಟಿ 50 42.95 ಪಾಯಿಂಟ್ಸ್ ಕುಸಿದು 19,751.05 ಕ್ಕೆ ತಲುಪಿದೆ. ಇಂದಿನ ಇಳಿಕೆಯ ಹೊರತಾಗಿಯೂ, ಬೆಂಚ್ ಮಾರ್ಕ್ ಸೂಚ್ಯಂಕಗಳು ತಲಾ ಶೇಕಡಾ 0.5 ರಷ್ಟು ಸಾಪ್ತಾಹಿಕ ಲಾಭವನ್ನು ದಾಖಲಿಸಿವೆ.
ವಲಯ ಸೂಚ್ಯಂಕಗಳಲ್ಲಿ ವಿಶಾಲವಾದ ನಿಫ್ಟಿ ಬ್ಯಾಂಕ್, ನಿಫ್ಟಿ ಐಟಿ ಮತ್ತು ನಿಫ್ಟಿ ಫೈನಾನ್ಷಿಯಲ್ ಸರ್ವೀಸಸ್ ಕುಸಿದವು. ಆಟೋ ಷೇರುಗಳು ಮಾತ್ರ ಬೆಂಚ್ ಮಾರ್ಕ್ ಸೂಚ್ಯಂಕಗಳಿಗೆ ಸ್ವಲ್ಪ ಏರಿಕೆ ಗಳಿಸಿ ಕೊಟ್ಟವು. ನಿಫ್ಟಿ 50 ಸೂಚ್ಯಂಕದಲ್ಲಿ ಟಾಟಾ ಮೋಟರ್ಸ್, ಎಚ್ಸಿಎಲ್ ಟೆಕ್, ಇಂಡಸ್ಇಂಡ್ ಬ್ಯಾಂಕ್, ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್ ಮತ್ತು ನೆಸ್ಲೆ ಇಂಡಿಯಾ ಮೊದಲ ಲಾಭ ಗಳಿಸಿದ ಪ್ರಮುಖ 5 ಷೇರುಗಳಾಗಿವೆ. ಆಕ್ಸಿಸ್ ಬ್ಯಾಂಕ್, ಅದಾನಿ ಎಂಟರ್ ಪ್ರೈಸಸ್, ಇನ್ಫೋಸಿಸ್, ಎಸ್ಬಿಐ ಮತ್ತು ವಿಪ್ರೋ ಹೆಚ್ಚು ನಷ್ಟ ಅನುಭವಿಸಿದ ಷೇರುಗಳಾಗಿವೆ.
ಭಾರತದಲ್ಲಿ ಚಿಲ್ಲರೆ ಹಣದುಬ್ಬರವು ಮೂರು ತಿಂಗಳ ಕನಿಷ್ಠ ಶೇಕಡಾ 5.02 ಕ್ಕೆ ಇಳಿದಿದ್ದರೂ, ಯುಎಸ್ ಬಡ್ಡಿದರಗಳ ಹೆಚ್ಚಳ ಸಾಧ್ಯತೆ ಮತ್ತು ಐಟಿ ಷೇರುಗಳಲ್ಲಿನ ಕುಸಿತದಿಂದಾಗಿ ದೇಶೀಯ ಮಾರುಕಟ್ಟೆಗಳು ಒತ್ತಡದಲ್ಲಿದ್ದವು.
ವೈಯಕ್ತಿಕ ಷೇರುಗಳಲ್ಲಿ ಟಾಟಾ ಮೋಟರ್ಸ್ ಬ್ಲೂ-ಚಿಪ್ ಷೇರುಗಳಲ್ಲಿ ಅತ್ಯಧಿಕ ಏರಿಕೆ ಕಂಡಿದ್ದು, ಶೇಕಡಾ 4.73 ರಷ್ಟು ಲಾಭ ಗಳಿಸಿದೆ. ನೆಸ್ಲೆ ಇಂಡಿಯಾ ಷೇರುಗಳು ಕೂಡ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದವು. ಏತನ್ಮಧ್ಯೆ, ಇಂಡಿಗೊ ಸಹ-ಸಂಸ್ಥಾಪಕ ರಾಕೇಶ್ ಗಂಗವಾಲ್ ಕಂಪನಿಯಲ್ಲಿ ಪಾಲನ್ನು ಖರೀದಿಸಲು ಮಾತುಕತೆ ನಡೆಸುತ್ತಿದ್ದಾರೆ ಎಂಬ ವರದಿಗಳ ನಂತರ ಸ್ಪೈಸ್ ಜೆಟ್ ಷೇರುಗಳು ಶೇಕಡಾ 19.39 ರಷ್ಟು ಏರಿಕೆಯಾಗಿವೆ.
ಮತ್ತೊಂದೆಡೆ, ಭಾರತೀಯ ರೂಪಾಯಿ ಹಿಂದಿನ ಮುಕ್ತಾಯದ 83.24 ಕ್ಕೆ ಹೋಲಿಸಿದರೆ ಪ್ರತಿ ಡಾಲರ್ಗೆ 83.26 ಕ್ಕೆ ಇಳಿದಿದೆ. ಇಂದು ರೂಪಾಯಿ ಪ್ರತಿ ಡಾಲರ್ಗೆ 83.24 ರಲ್ಲಿ ಪ್ರಾರಂಭವಾಯಿತು. ಭಾರತದ ವಿದೇಶಿ ವಿನಿಮಯ ಮೀಸಲು ಸತತ ಐದನೇ ವಾರ ಕುಸಿದಿದೆ ಮತ್ತು ಅಕ್ಟೋಬರ್ 6 ರ ವೇಳೆಗೆ 584.74 ಬಿಲಿಯನ್ ಡಾಲರ್ಗೆ ತಲುಪಿದೆ. ಇದು ಐದು ತಿಂಗಳಲ್ಲೇ ಅತ್ಯಂತ ಕನಿಷ್ಠವಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಂಕಿ ಅಂಶಗಳು ಶುಕ್ರವಾರ ತೋರಿಸಿವೆ. ವಿದೇಶಿ ವಿನಿಮಯ ಮೀಸಲು ಹಿಂದಿನ ವಾರಕ್ಕಿಂತ 2.17 ಬಿಲಿಯನ್ ಡಾಲರ್ ಕಡಿಮೆಯಾಗಿದೆ.
ಇದನ್ನೂ ಓದಿ : ಜಿಯೋಭಾರತ್ B1 4G ಫೀಚರ್ ಫೋನ್ ಬಿಡುಗಡೆ: ಬೆಲೆ ₹__ರೂ!