ಮುಂಬೈ : ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 6 ಪೈಸೆಗಳಷ್ಟು ಏರಿಕೆಯಾಗಿ 82.54 ಗೆ ತಲುಪಿದೆ. ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿನ ಸಕಾರಾತ್ಮಕ ಬೆಳವಣಿಗೆಗಳು ಮತ್ತು ವಿದೇಶಿ ನಿಧಿಗಳ ಒಳಹರಿವುಗಳ ಕಾರಣದಿಂದ ರೂಪಾಯಿ ಬಲಗೊಂಡಿದೆ. ಯುಎಸ್ ಅಧ್ಯಕ್ಷ ಜೋ ಬೈಡನ್ ಮತ್ತು ರಿಪಬ್ಲಿಕನ್ ಹೌಸ್ ಸ್ಪೀಕರ್ ಕೆವಿನ್ ಮೆಕಾರ್ಥಿ ನಡುವಿನ ಯುಎಸ್ ಸಾಲದ ಸೀಲಿಂಗ್‌ನ ಒಪ್ಪಂದಕ್ಕಾಗಿ ವಿದೇಶೀ ವಿನಿಮಯ ವ್ಯಾಪಾರಿಗಳು ಕಾಯುತ್ತಿರುವ ಮಧ್ಯೆ ಡಾಲರ್ ಸೂಚ್ಯಂಕವು 104 ಮಟ್ಟದಲ್ಲಿ ಬಹುತೇಕ ಸ್ಥಿರವಾಗಿದೆ.
ಅಂತರಬ್ಯಾಂಕ್ ವಿದೇಶಿ ವಿನಿಮಯದಲ್ಲಿ ದೇಸಿ ಕರೆನ್ಸಿ ರೂಪಾಯಿ ಡಾಲರ್ ವಿರುದ್ಧ 82.57 ನಲ್ಲಿ ಬಲವಾಗಿ ವಹಿವಾಟು ಆರಂಭಿಸಿತು ಮತ್ತು 82.51 ರ ಅತ್ಯುನ್ನತ ಮಟ್ಟವನ್ನು ತಲುಪಿತು. ನಂತರ ಅದು 82.54 ಕ್ಕೆ ಕುಸಿಯಿತು. ಈ ಮೂಲಕ ರೂಪಾಯಿ ಹಿಂದಿನ ದಿನದ ಮುಕ್ತಾಯಕ್ಕಿಂತ 6 ಪೈಸೆಯ ಲಾಭ ದಾಖಲಿಸಿತು. ಶುಕ್ರವಾರ ಯುಎಸ್ ಕರೆನ್ಸಿ ಎದುರು ರೂಪಾಯಿ 82.60 ಕ್ಕೆ ಕೊನೆಗೊಂಡಿತ್ತು.
ಭಾರತೀಯ ಕರೆನ್ಸಿಯು ಯುಎಸ್ ಕರೆನ್ಸಿಯ ವಿರುದ್ಧ 82.25 ಮಟ್ಟವನ್ನು ತಲುಪುವ ಸಾಧ್ಯತೆಯಿದೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಮಾರುಕಟ್ಟೆ ತಂತ್ರಜ್ಞ ಆನಂದ್ ಜೇಮ್ಸ್ ಹೇಳಿದ್ದಾರೆ. 82.70 ಕ್ಕಿಂತ ಮೇಲೆ ಹೋಗುವ ಸಾಮರ್ಥ್ಯವಿಲ್ಲದ ಕಾರಣದಿಂದ ರೂಪಾಯಿ ಮೌಲ್ಯ ಮತ್ತೆ 82.45 ಕ್ಕೆ ಇಳಿಕೆಯಾಗುವ ಅಪಾಯವಿದೆ. 82.45ಕ್ಕೆ ಇಳಿಕೆಯಾದೆ ನಂತರ 82.2ಕ್ಕೂ ಇಳಿಕೆಯಾಗಬಹುದು. ಹೀಗಾಗಿ ನಾವು ಜಾಗರೂಕರಾಗಿ ವಹಿವಾಟು ನಡೆಸುವುದು ಒಳಿತು ಎಂದು ಜೇಮ್ಸ್ ಹೇಳಿದರು.
ಏತನ್ಮಧ್ಯೆ, ಆರು ಕರೆನ್ಸಿಗಳನ್ನು ಒಳಗೊಂಡಿರುವ ಡಾಲರ್ ಸೂಚ್ಯಂಕವು ಶೇಕಡಾ 0.02 ರಷ್ಟು ಕುಸಿದು 104.18 ಕ್ಕೆ ತಲುಪಿದೆ. ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಪ್ರತಿ ಬ್ಯಾರೆಲ್‌ಗೆ 0.69 ರಷ್ಟು ಏರಿಕೆಯಾಗಿ 77.48 ಯುಎಸ್ ಡಾಲರ್‌ಗೆ ತಲುಪಿದೆ. ದೇಶೀಯ ಈಕ್ವಿಟಿ ಮಾರುಕಟ್ಟೆಯಲ್ಲಿ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 482.62 ಪಾಯಿಂಟ್‌ಗಳು ಅಥವಾ ಶೇಕಡಾ 0.77 ರಷ್ಟು ಏರಿಕೆ ಕಂಡು 62,984.31 ಕ್ಕೆ ತಲುಪಿದೆ.
ವಿಶಾಲವಾದ NSE ನಿಫ್ಟಿ 134.05 ಪಾಯಿಂಟ್‌ಗಳು ಅಥವಾ 0.72 ಶೇಕಡಾ ಏರಿಕೆಯಾಗಿ 18,633.40 ಕ್ಕೆ ತಲುಪಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಶುಕ್ರವಾರ ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಖರೀದಿದಾರರಾಗಿದ್ದರು. ಷೇರು ವಿನಿಮಯ ಕಚೇರಿಯ ಮಾಹಿತಿಯ ಪ್ರಕಾರ ಅವರು 350.15 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.
ಯುಎಸ್ ಡಾಲರ್ ವಿರುದ್ಧ ಭಾರತೀಯ ರೂಪಾಯಿಯ ಮೌಲ್ಯವು ಪೂರೈಕೆ ಮತ್ತು ಬೇಡಿಕೆಯ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. US ಡಾಲರ್‌ಗೆ ಬೇಡಿಕೆ ಹೆಚ್ಚಾದಾಗ, ಭಾರತೀಯ ರೂಪಾಯಿ ಮೌಲ್ಯವು ಕುಸಿಯುತ್ತದೆ ಮತ್ತು ಡಾಲರ್‌ಗೆ ಬೇಡಿಕೆ ಕಡಿಮೆಯಾದಾಗ ರೂಪಾಯಿ ಮೌಲ್ಯ ಹೆಚ್ಚಾಗುತ್ತದೆ. ಒಂದು ದೇಶವು ರಫ್ತು ಮಾಡುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಂಡಾಗ, ಡಾಲರ್‌ಗಳ ಬೇಡಿಕೆಯು ಪೂರೈಕೆಗಿಂತ ಹೆಚ್ಚಾಗುತ್ತದೆ. ಆಗ ಅದರ ಮೌಲ್ಯ ಸ್ಥಳೀಯ ಕರೆನ್ಸಿಗಳನ್ನು ಮೀರಿಸುತ್ತದೆ.
ಇದನ್ನೂ ಓದಿ : ಕ್ವಿಕ್ ಕಾಮರ್ಸ್ ವಿಸ್ತಾರ: ಡೆಲಿವರಿ ಬಾಯ್ಗಳಿಗೆ ಹೆಚ್ಚುತ್ತಿರುವ ಬೇಡಿಕೆ