ಹೈದರಾಬಾದ್: ದೇಶದೊಳಗೆ ವಿದೇಶಿ ವಿನಿಮಯವನ್ನು ಆಕರ್ಷಿಸಲು ರಿಸರ್ವ್ ಬ್ಯಾಂಕ್ ಹಲವಾರು ಕ್ರಮಗಳನ್ನು ಕೈಗೊಂಡಿದೆ. ವಿಶೇಷವಾಗಿ ಅಮೆರಿಕನ್ ಡಾಲರ್ ಸಂಗ್ರಹಿಸಲು ಮತ್ತು ರೂಪಾಯಿ ಮೌಲ್ಯ ಕುಸಿತಗಳನ್ನು ತಡೆಯಲು ಆರ್‌ಬಿಐ ಮುಂದಾಗಿದೆ. ಇದರ ಭಾಗವಾಗಿ ಕೆಲ ವಿಶೇಷ ಸೌಲಭ್ಯಗಳನ್ನು ಪರಿಚಯಿಸಲಾಗಿದೆ. ಅದರಂತೆ, ಅನೇಕ ಬ್ಯಾಂಕ್ಗಳು ವಿದೇಶಿ ಕರೆನ್ಸಿ ಅನಿವಾಸಿ (Foreign Currency Non-Resident -FCNR) ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿವೆ.
ವಿದೇಶದಲ್ಲಿ ಗಳಿಸಿದ ಆದಾಯವನ್ನು ದೇಶೀಯ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲು ವಿದೇಶಿ ಕರೆನ್ಸಿ ನಾನ್ - ಡೆಪಾಸಿಟ್ ರೆಸಿಡೆಂಟ್ (ಎಫ್‌ಸಿಎನ್‌ಆರ್) ಖಾತೆಗಳನ್ನು ತೆರೆಯಬಹುದು. ಇವುಗಳಲ್ಲಿ ಆಯಾ ದೇಶಗಳ ಕರೆನ್ಸಿಯನ್ನು ನೇರವಾಗಿ ಠೇವಣಿ ಇಡಬಹುದು. ದೇಶದಲ್ಲಿ ವಿದೇಶಿ ವಿನಿಮಯ ಮೀಸಲು ಹೆಚ್ಚಿಸಲು ಆರ್‌ಬಿಐ ಈ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಲು ಅವಕಾಶ ನೀಡಿದೆ.
ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಎಫ್‌ಸಿಎನ್‌ಆರ್ ಖಾತೆಯಲ್ಲಿನ ಯುಎಸ್ ಡಾಲರ್ ಠೇವಣಿಗಳ ಮೇಲಿನ ವಾರ್ಷಿಕ ಬಡ್ಡಿ ದರವನ್ನು ವಿವಿಧ ಅವಧಿಗಳಿಗೆ ಶೇಕಡಾ 2.85 ರಿಂದ ಶೇಕಡಾ 3.25 ಕ್ಕೆ ನಿಗದಿಪಡಿಸಿದೆ. ಜುಲೈ 10ರಿಂದ ಈ ಹೆಚ್ಚಳ ಜಾರಿಯಾಗಲಿದೆ ಎಂದು ಪ್ರಕಟಿಸಲಾಗಿದ್ದು, ಒಂದು ವರ್ಷದ ಅವಧಿಯ ಠೇವಣಿಗಳ ಮೇಲೆ ಶೇಕಡಾ 1.80ರಿಂದ ಶೇಕಡಾ 2.85ಕ್ಕೆ ಏರಿಕೆಯಾಗಿದೆ. ಮೂರರಿಂದ ನಾಲ್ಕು ವರ್ಷಗಳ ಠೇವಣಿಗಳ ಮೇಲೆ ಶೇಕಡಾ 3.10 ಬಡ್ಡಿ ಮತ್ತು ಐದು ವರ್ಷಗಳ ಠೇವಣಿಗಳ ಮೇಲೆ ಶೇಕಡಾ 3.25 ಬಡ್ಡಿ ಸಿಗಲಿದೆ.
ಎಚ್ಡಿಎಫ್ಸಿ ಬ್ಯಾಂಕ್ ಒಂದರಿಂದ ಎರಡು ವರ್ಷಗಳ ಅವಧಿಗೆ ಎಫ್‌ಸಿಎನ್‌ಆರ್ ಖಾತೆಯಲ್ಲಿನ ಯುಎಸ್ ಡಾಲರ್ ಠೇವಣಿಗಳ ಮೇಲಿನ ಬಡ್ಡಿಯನ್ನು ಶೇಕಡಾ 3.35 ಕ್ಕೆ ಹೆಚ್ಚಿಸಿದೆ. ಇದು ಜುಲೈ 9 ರಿಂದ ಜಾರಿಗೆ ಬಂದಿದೆ. ಎಫ್‌ಸಿಎನ್‌ಆರ್ ಠೇವಣಿ ದರವನ್ನು ಕಾಲಕಾಲಕ್ಕೆ ಹೆಚ್ಚಿಸುವುದಾಗಿ ಎಚ್ಡಿಎಫ್ಸಿ ಬ್ಯಾಂಕ್ ತಿಳಿಸಿದೆ.
ಐಸಿಐಸಿಐ ಬ್ಯಾಂಕ್ 3,50,000 ಡಾಲರ್ಗಳಿಗಿಂತ ಹೆಚ್ಚಿನ ಮೊತ್ತದ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇಕಡಾ 0.15 ರಷ್ಟು ಹೆಚ್ಚಿಸಿದೆ. ಜುಲೈ 13ರಿಂದ ಹೊಸ ಬಡ್ಡಿ ದರ ಶೇಕಡಾ 3.50 ಆಗಿರಲಿದೆ. ಈ ದರವು 12-24 ತಿಂಗಳುಗಳಿಗೆ ಅನ್ವಯಿಸುತ್ತದೆ.
ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಅನಿವಾಸಿ ಬಾಹ್ಯ (NRE) ಖಾತೆಗಳಲ್ಲಿನ ಸ್ಥಿರ ಠೇವಣಿ ಮತ್ತು ಮರುಕಳಿಸುವ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಪರಿಷ್ಕರಿಸಿದೆ. 888 ದಿನಗಳ ಸ್ಥಿರ ಠೇವಣಿ (FD) ಮೇಲೆ ಸುಮಾರು 7.40 ಶೇಕಡಾ ಬಡ್ಡಿ ಮತ್ತು 36 ತಿಂಗಳ ಮರುಕಳಿಸುವ ಠೇವಣಿ (RD) ಮೇಲೆ 7.30 ಶೇಕಡಾ ಬಡ್ಡಿಯನ್ನು ಘೋಷಿಸಿದೆ.
ಇದನ್ನು ಓದಿ:ರೆಪೋ ದರ ಏರಿಸಿದ ಆರ್‌ಬಿಐ: ಗೃಹ, ವಾಹನ ಸಾಲದ ಇಎಂಐ ಹೆಚ್ಚಳ ಹೊರೆ