ನವದೆಹಲಿ: ಭಾರತೀಯ ಕೈಗಾರಿಕಾ ಹಣಕಾಸು ನಿಗಮಕ್ಕೆ (ಐಎಫ್‌ಸಿಐ) ವಂಚಿಸಿದ ಆರೋಪದ ಮೇಲೆ ಪರಾರಿಯಾಗಿರುವ ಉದ್ಯಮಿ ಮೆಹುಲ್ ಚೋಕ್ಸಿ ಮತ್ತು ಅವರ ಕಂಪನಿ ಗೀತಾಂಜಲಿ ಜೆಮ್ಸ್ ವಿರುದ್ಧ ಹೊಸ ಪ್ರಕರಣ ದಾಖಲಿಸಲಾಗಿದೆ ಎಂದು ಕೇಂದ್ರ ತನಿಖಾ ದಳ (ಸಿಬಿಐ) ಸೋಮವಾರ ತಿಳಿಸಿದೆ. 2014-18ರ ನಡುವೆ ಉದ್ಯಮಿ ಮೆಹುಲ್ ಚೋಕ್ಸಿ ಸುಮಾರು 22 ಕೋಟಿ ರೂ. ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ (ಪಿಎನ್‌ಬಿ) 13,500 ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಸಿಬಿಐ ಮತ್ತು ಇಡಿಗೆ ಭಾರತದಲ್ಲಿ ಚೋಕ್ಸಿ ಮೋಸ್ಟ್ ವಾಂಟೆಡ್ ಆಗಿದ್ದಾರೆ. ಕಳೆದ ವರ್ಷ ಮೇ 23 ರಂದು ಡೊಮಿನಿಕಾದಿಂದ ಚೋಕ್ಸಿ ನಾಪತ್ತೆಯಾಗಿದ್ದರು. ಬಳಿಕ ಮೇ 26 ರಂದು ಡೊಮಿನಿಕಾದಲ್ಲಿಯೇ ಅವರನ್ನು ಸೆರೆಹಿಡಿಯಲಾಗಿತ್ತು. ಚೋಕ್ಸಿಯ ವಕೀಲರು ಸಲ್ಲಿಸಿದ ಹೇಬಿಯಸ್ ಕಾರ್ಪಸ್ನ್ನು ಆಲಿಸಿದ ನಂತರ ಡೊಮಿನಿಕನ್ ನ್ಯಾಯಾಲಯವು ಅವರನ್ನು ಗಡಿಪಾರು ಮಾಡುವುದನ್ನು ತಡೆಯಿತು.
ಇದನ್ನೂ ಓದಿ: ಪ್ರಯಾಣಿಕರ ನಡುವಿನ ಕಲಹಕ್ಕೆ ಒಂದೂವರೆ ಗಂಟೆ ವಿಳಂಬವಾದ ವಿಮಾನ ಹಾರಾಟ!
ಚೋಕ್ಸಿ ಅವರು ಜನವರಿ 4, 2018 ರಿಂದ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ನೆಲೆಸಿದ್ದಾರೆ. ಸಿಬಿಐ ಚೋಕ್ಸಿ ಮತ್ತು ಅವರ ಸೋದರಳಿಯ, ವಜ್ರದ ವ್ಯಾಪಾರಿ ನೀರವ್ ಮೋದಿ ವಿರುದ್ಧ ಬ್ಯಾಂಕ್ ವಂಚನೆ ಪ್ರಕರಣವನ್ನು ದಾಖಲಿಸುವ ಕೆಲವು ದಿನಗಳ ಮೊದಲು ಅವರು ಅಲ್ಲಿಗೆ ಹೋಗಿದ್ದಾರೆ. ಪ್ರಕರಣದಲ್ಲಿ ಪ್ರತ್ಯೇಕ ಚಾರ್ಜ್ ಶೀಟ್ ಸಲ್ಲಿಸಿರುವ ಸಿಬಿಐ ಮತ್ತು ಇಡಿ ಅವರ ಹಸ್ತಾಂತರಕ್ಕೆ ಪ್ರಯತ್ನಿಸುತ್ತಿವೆ. ಏಪ್ರಿಲ್ 11 ರಂದು ನೀರವ್ ಮೋದಿಯ ಆಪ್ತ ಸಹಾಯಕ ಸುಭಾಷ್ ಶಂಕರ್ ಅವರನ್ನು ಪಿಎನ್‌ಬಿ ವಂಚನೆಗೆ ಸಂಬಂಧಿಸಿದಂತೆ ಸಿಬಿಐ ಕೈರೋದಿಂದ ಮುಂಬೈಗೆ ಕರೆದುಕೊಂಡು ಬಂದಿದೆ. ಶಂಕರ್ ನೀರವ್ ಮೋದಿ ಕಂಪನಿಯಲ್ಲಿ ಡಿಜಿಎಂ ಫೈನಾನ್ಸ್ ಆಗಿದ್ದರು. ಅವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿತ್ತು.