ನವದೆಹಲಿ: 8.2 ಕೋಟಿ ರೂ ಮತ್ತು ಅದಕ್ಕಿಂತ ಹೆಚ್ಚಿನ ನಿವ್ವಳ ಮೌಲ್ಯ ಹೊಂದಿರುವ ಶ್ರೀಮಂತರ ಸಂಖ್ಯೆ 2027ರ ವೇಳೆಗೆ 16.57 ಲಕ್ಷಕ್ಕೆ ತಲುಪಲಿದೆ. ರಿಯಲ್ ಎಸ್ಟೇಟ್ ಸಲಹಾ ಸೇವೆಗಳ ಸಂಸ್ಥೆ ನೈಟ್ ಫ್ರಾಂಕ್ ಭಾರತ 2022 ರ ಇತ್ತೀಚಿನ ವರದಿಯಲ್ಲಿ ಇದನ್ನು ಬಹಿರಂಗಪಡಿಸಿದೆ. 2022ರಲ್ಲಿ ನಮ್ಮ ದೇಶದಲ್ಲಿ 7.97 ಲಕ್ಷ ಶ್ರೀಮಂತರಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಈ ಸಂಖ್ಯೆ ದ್ವಿಗುಣಗೊಳ್ಳಲಿದೆ ಎಂದು ತಿಳಿಸಿದೆ. ವರದಿಯ ಪ್ರಮುಖ ಅಂಶಗಳು..
* 250 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಆಸ್ತಿ ಹೊಂದಿರುವ ದೇಶದಲ್ಲಿ 12,069 ಶ್ರೀಮಂತರಿದ್ದರೆ, 2027 ರ ವೇಳೆಗೆ ಈ ಸಂಖ್ಯೆ 58.4% ರಷ್ಟು ಹೆಚ್ಚಾಗಲಿದ್ದು, 19,119 ಕ್ಕೆ ತಲುಪಲಿದೆ.
* ನಮ್ಮ ದೇಶದಲ್ಲಿ ಪ್ರಸ್ತುತ 161 ಬಿಲಿಯನೇರ್‌ಗಳಿದ್ದಾರೆ. (ಇವರ ಆಸ್ತಿ 8,200 ಕೋಟಿಗಿಂತ ಹೆಚ್ಚು), ಈ ಸಂಖ್ಯೆ 2027 ರ ವೇಳೆಗೆ 195 ಕ್ಕೆ ಏರುತ್ತದೆ.
* 2021 ಕ್ಕೆ ಹೋಲಿಸಿದರೆ 2022 ರಲ್ಲಿ ಶ್ರೀಮಂತರ ಸಂಖ್ಯೆ ಹೆಚ್ಚಿದ್ದರೂ, ಅತಿ ಶ್ರೀಮಂತರ ಸಂಖ್ಯೆ 7.5% ರಷ್ಟು ಕಡಿಮೆಯಾಗಿದೆ. ಅದೇ ಸಮಯದಲ್ಲಿ, ಬಿಲಿಯನೇರ್ಗಳ ಸಂಖ್ಯೆಯು 4.5% ರಷ್ಟು ಹೆಚ್ಚಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಾಗತಿಕವಾಗಿ ಶ್ರೀಮಂತರ ಸಂಖ್ಯೆ ಶೇ.3.8ರಷ್ಟು ಕಡಿಮೆಯಾಗಿದೆ. ಆರ್ಥಿಕ ಹಿಂಜರಿತ, ಕೇಂದ್ರೀಯ ಬ್ಯಾಂಕ್ಗಳ ಬಡ್ಡಿದರ ಹೆಚ್ಚಳ ಮತ್ತು ಅಧಿಕ ಹಣದುಬ್ಬರದಿಂದಾಗಿ ಆಸ್ತಿ ಮೌಲ್ಯದಲ್ಲಿ ಇಳಿಕೆ ಇದಕ್ಕೆ ಕಾರಣ ಎಂದು ವರದಿ ವಿಶ್ಲೇಷಿಸಿದೆ.
ಭಾರತದಲ್ಲಿ ಸಂಪತ್ತು ವೃದ್ಧಿಗೆ ಅವಕಾಶ ಕಡಿಮೆ: ಸಂಪತ್ತಿನ ಕುರಿತ ಸದ್ಯದ ಜಾಗತಿಕ ಪ್ರವೃತ್ತಿ ನಮ್ಮ ದೇಶದಲ್ಲಿಯೂ ಇದೆ. ದೇಶದಲ್ಲಿ ಬಡ್ಡಿದರಗಳು ಹೆಚ್ಚಾಗಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿರುವುದರಿಂದ ಅತಿ ಶ್ರೀಮಂತರ ಸಂಖ್ಯೆ ಕಡಿಮೆಯಾಗಿದೆ. ಆದರೆ ಒಟ್ಟಿನಲ್ಲಿ, ಶ್ರೀಮಂತರು-ಕೋಟ್ಯಧಿಪತಿಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ನೋಡಿದರೆ ಶ್ರೀಮಂತರ ಸಂಪತ್ತು ಹೆಚ್ಚಲು ಇತರ ದೇಶಗಳಿಗಿಂತ ನಮ್ಮ ದೇಶದಲ್ಲಿ ಹೆಚ್ಚು ಅನುಕೂಲಕರ ಪರಿಸ್ಥಿತಿಗಳಿವೆ ಎಂಬುದು ಸ್ಪಷ್ಟ.
* ನೈಟ್ ಫ್ರಾಂಕ್ ಇಂಡಿಯಾದ ಎಂಡಿ ಶಿಶಿರ್ ಬಜಾಜ್ ಅವರು ಉತ್ಪಾದನಾ ವಲಯದ ಜೊತೆಗೆ ಮೂಲಸೌಕರ್ಯ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ಲಭ್ಯವಿರುವುದರಿಂದ ಸಂಪತ್ತಿನ ಸೃಷ್ಟಿ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ.
ಏಷ್ಯಾದ ದೇಶಗಳು ಯುರೋಪ್ ಅನ್ನು ಮೀರಿಸುತ್ತಿವೆ: ವಿಶ್ವದ ಸಂಪತ್ತು ಸೃಷ್ಟಿಯ ಪ್ರಮುಖ 10 ಸ್ಥಳಗಳಲ್ಲಿ 3 ಏಷ್ಯಾ ಖಂಡದಲ್ಲಿವೆ ಎಂಬುದು ಗಮನಾರ್ಹ. ಅವುಗಳೆಂದರೆ ಸಿಂಗಾಪುರ, ಮಲೇಷ್ಯಾ ಮತ್ತು ಇಂಡೋನೇಷ್ಯಾ. ಈ ಮೂರು ದೇಶಗಳಲ್ಲಿ ಶ್ರೀಮಂತರ ಸಂಖ್ಯೆ ಶೇ.5ರಿಂದ ಶೇ.7ಕ್ಕೆ ಏರಿಕೆಯಾಗಿದೆ. ಮುಂದಿನ ಐದು ವರ್ಷಗಳಲ್ಲಿ ಏಷ್ಯಾದ ದೇಶಗಳ ಶ್ರೀಮಂತರ ಸಂಖ್ಯೆ 2.10 ಲಕ್ಷಕ್ಕೆ ಏರಿಕೆಯಾಗಲಿದೆ ಎಂದು ಈ ವರದಿ ವಿವರಿಸುತ್ತದೆ. ಹೀಗಾಗಿ ಏಷ್ಯಾದ ಶ್ರೀಮಂತ ರಾಷ್ಟ್ರಗಳ ಸಂಖ್ಯೆ ಯುರೋಪ್ ಅನ್ನು ಮೀರಿಸುತ್ತದೆ.
ಇದನ್ನೂ ಓದಿ: ಹವಾಮಾನ ಬಿಕ್ಕಟ್ಟು; ಬ್ರಿಟನ್ ಕಾಫಿ ಪ್ರಿಯರ ಮೇಲೆ ಹೆಚ್ಚಿನ ಪರಿಣಾಮ