ಚೆನ್ನೈ : ಚಿನ್ನದ ಬೆಲೆ ಪ್ರತಿ ಹತ್ತು ಗ್ರಾಂ ಗೆ ಗುರುವಾರದಂದು ದಾಖಲೆಯ 61,498 ರೂಪಾಯಿಗೆ ತಲುಪಿದೆ. ಹಳದಿ ಲೋಹದ ಬೆಲೆಗಳು ಭವಿಷ್ಯದಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿದ್ದು, 2024ರಲ್ಲಿ ಹೂಡಿಕೆದಾರರಿಗೆ ಶೇ 10 ರಿಂದ 15 ರಷ್ಟು ಆದಾಯ ನೀಡಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ. "ಚಿನ್ನದ ಬೆಲೆಯು ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.
ದೇಶೀಯವಾಗಿ ಇದರ ಬೆಲೆ ಪ್ರತಿ ಹತ್ತು ಗ್ರಾಂ ಗೆ 61,498 ರೂಪಾಯಿಗೆ ತಲುಪಿದೆ. ಹಾಗೆಯೇ ಬೆಳ್ಳಿಯ ದರ ಪ್ರತಿ ಕೆಜಿಗೆ 77,500 ರೂಪಾಯಿಗೆ ತಲುಪಿದೆ. ಅಂತರಾಷ್ಟ್ರೀಯವಾಗಿಯೂ ಅಮೂಲ್ಯ ಲೋಹಗಳು ದಾಖಲೆಯ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು 2,080 ಡಾಲರ್ ಮತ್ತು ಬೆಳ್ಳಿ 26 ಡಾಲರ್ಗೆ ತಲುಪಿವೆ ಎಂದು ಕಾಮಾ ಜ್ಯುವೆಲರಿ ಎಂಡಿ ಕಾಲಿನ್ ಶಾ ಹೇಳಿದರು.
ಅಮೆರಿಕ್ ಫೆಡರಲ್ ಮೀಟಿಂಗ್, ಸಾಲಕ್ಕೆ ಮಿತಿ ಹೇರಿಕೆ ಮತ್ತು ಆರ್ಥಿಕ ಹಿಂಜರಿತದ ಕಾರಣದಿಂದ ಯುಎಸ್ ಡಾಲರ್ ಮೌಲ್ಯದ ಮೇಲೆ ಪರಿಣಾಮ ಬೀರಿದ ಕಾರಣದಿಂದ ಚಿನ್ನದ ದರಗಳು ಹೆಚ್ಚಾಗಿವೆ ಎಂದು ಶಾಹ ತಿಳಿಸಿದರು. ಯುಎಸ್ ಫೆಡರಲ್ ರಿಸರ್ವ್ ಬುಧವಾರದಂದು ಪಾಲಿಸಿ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿತು. ಇದರ ನಂತರದಲ್ಲಿ ಚಿನ್ನದ ಬೆಲೆಗಳು ಪ್ರತಿ ಔನ್ಸ್ಗೆ 2,080 ಡಾಲರ್ ಅನ್ನು ಮುಟ್ಟಿದವು. ಯುಎಸ್ ಫೆಡ್‌ನ ದರಗಳ ಹೆಚ್ಚಳವು ಡಾಲರ್ ಮೇಲೆ ಒತ್ತಡ ಉಂಟುಮಾಡಿದೆ ಮತ್ತು 2023ರ ವರ್ಷಾಂತ್ಯಕ್ಕೆ ಆರ್ಥಿಕ ಹಿಂಜರಿತ ಉಂಟಾಗುವ ಆತಂಕವು ಚಿನ್ನದ ಮೇಲೆ ಹೆಚ್ಚು ಭರವಸೆ ಮೂಡಿಸಿದೆ. ಪ್ರಸ್ತುತ ಆರ್ಥಿಕ ಪರಿಸ್ಥಿತಿಗಳು ಕೂಡ ಚಿನ್ನ ಮತ್ತು ಬೆಳ್ಳಿಯಂತಹ ಸುರಕ್ಷಿತ ಹೂಡಿಕೆಯ ಆಕರ್ಷಣೆಯನ್ನು ಹೆಚ್ಚಿಸಿವೆ.
ಅಂತಾರಾಷ್ಟ್ರೀಯ ಚಿನ್ನದ ಬೆಲೆಗಳು ಪ್ರತಿ ಔನ್ಸ್ಗೆ 2,090 ರಿಂದ 2,100 ಡಾಲರ್ ಮತ್ತು ಪ್ರತಿ ಹತ್ತು ಗ್ರಾಂ ಗೆ 62,500 ರಿಂದ 62,750 ರೂಪಾಯಿ ಮತ್ತು ಬೆಳ್ಳಿಯ ಬೆಲೆಗಳು 77,600 ರಿಂದ 77,800 ರೂಪಾಯಿ ಮತ್ತು ಪ್ರತಿ ಔನ್ಸ್ಗೆ 26.50 ರಿಂದ 27 ಡಾಲರ್ಗೆ ತಲುಪುವ ಸಾಧ್ಯತೆಯಿದೆ. ನಷ್ಟ ಉಂಟು ಮಾಡಬಹುದಾದ ಆಸ್ತಿಗಳಲ್ಲಿ ಹೂಡಿಕೆ ಮಾಡುವುದರ ಬದಲಿಗೆ ಚಿನ್ನದ ಮೇಲೆ ಹೂಡಿಕೆ ಮಾಡಿದಲ್ಲಿ ಅತಿ ಕನಿಷ್ಠ ಎಂದರೆ ಶೇ 10 ರಿಂದ 15 ಮತ್ತು ಗರಿಷ್ಠ ಎಂದರೆ ಶೇ 15 ರಿಂದ 20 ರಷ್ಟು ಪ್ರತಿಫಲ ಸಿಗುವ ಸಾಧ್ಯತೆಗಳಿವೆ ಎಂದು ಎಲ್ಕೆಪಿ ಸೆಕ್ಯೂರಿಟೀಸ್ನ ಸಂಶೋಧನಾ ವಿಶ್ಲೇಷಕ ಜತೀನ್ ತ್ರಿವೇದಿ ಹೇಳಿದರು.
ಹಣಕಾಸು ವರ್ಷ 2023 ರಲ್ಲಿ ಚಿನ್ನದ ಬೆಲೆಗಳು ದೇಶೀಯ ಮಾರುಕಟ್ಟೆಗಳಲ್ಲಿ 52,000 ರೂ.ಗಳಿಂದ 60,000 ರೂ.ಗೆ ಅಂದರೆ 8,000 ರೂ.ಗಳಷ್ಟು ಹೆಚ್ಚಾಗಿವೆ. ಇದು ಶೇ 15 ರಷ್ಟು ಆದಾಯವಾಗಿದೆ. ರಷ್ಯಾ ಮತ್ತು ಉಕ್ರೇನ್‌ನಲ್ಲಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯು ಉತ್ತಮ ಆದಾಯ ನೀಡುವ ವಿಷಯದಲ್ಲಿ ಚಿನ್ನವು ಪರಿಪೂರ್ಣವಾದ ಹೂಡಿಕೆ ಮಾರ್ಗ ಎಂದು ಸಾಬೀತುಪಡಿಸಿದೆ ಎಂದು ಶಾಹ ತಿಳಿಸಿದರು. ಜಾಗತಿಕವಾಗಿ ಹಣದುಬ್ಬರ ಈಗಲೂ ಹೆಚ್ಚಾಗಿರುವುದರಿಂದ ಸುರಕ್ಷತೆಯ ದೃಷ್ಟಿಕೋನದಲ್ಲಿ ಚಿನ್ನವು ಲಾಭದಾಯಕವಾಗಿ ಕಾಣುತ್ತದೆ.
ಇದನ್ನೂ ಓದಿ: 5ಜಿ ಸ್ಮಾರ್ಟ್ಫೋನ್ ಮಾರಾಟ ಶೇ 50ರಷ್ಟು ಏರಿಕೆ: ಮುಂಚೂಣಿಯಲ್ಲಿ ಸ್ಯಾಮ್ಸಂಗ್