ಹೈದರಾಬಾದ್: ನೀವು ಆದಾಯ ತೆರಿಗೆಯನ್ನು ಪಾವತಿಸಿದ್ದೀರಾ? ಒಂದು ವೇಳೆ ನೀವು ಕಟ್ಟಬೇಕಾದ ತೆರಿಗೆಗಿಂತ ಹೆಚ್ಚಿನ ಹಣವನ್ನು ಪಾವತಿ ಮಾಡಿದ್ದರೆ, ಸೂಕ್ತವಾದ ರಿಟರ್ನ್‌ಗಳನ್ನು ಸಲ್ಲಿಸಿದ್ದರೆ, ನೀವು ಆ ಹಣವನ್ನು ರಿಫಂಡ್ ಮಾಡಿಕೊಳ್ಳಲು ಅರ್ಹರಾಗಿರುತ್ತೀರಿ. ಕಳೆದ ಹಣಕಾಸು ವರ್ಷದಲ್ಲಿ ಅಂದರೆ 2020-21ರಲ್ಲಿ (2021-22 ಮೌಲ್ಯಮಾಪನ ವರ್ಷ) ಅನೇಕ ಮಂದಿ ತಮ್ಮ ರಿಟರ್ನ್‌ಗಳನ್ನು ಸಲ್ಲಿಸಿದ್ದಾರೆ ಮತ್ತು ಜೊತೆಗೆ ರಿಫಂಡ್ ಕೂಡಾ ಪಡೆದುಕೊಂಡಿರುತ್ತಾರೆ. ಆದರೆ ಕೆಲವರು ತಾಂತ್ರಿಕ ದೋಷಗಳಿಂದ ರಿಫಂಡ್ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ನೀವು ರಿಫಂಡ್ ಪಡೆದುಕೊಳ್ಳಲು ಸಾಧ್ಯವಾಗದಿದ್ದರೆ, ಈ ಕೆಳಗಿನ ಸಲಹೆಗಳನ್ನೊಮ್ಮೆ ನೋಡಿ.
ಆದಾಯ ತೆರಿಗೆ ಬಾಕಿಗಳು: ಹಿಂದಿನ ಮೌಲ್ಯಮಾಪನ ವರ್ಷಗಳಲ್ಲಿ ತೆರಿಗೆ ಬಾಕಿ ಇದ್ದರೆ, ಆದಾಯ ತೆರಿಗೆ ಇಲಾಖೆಯು ನಿಮಗೆ ಹಣವನ್ನು ರಿಫಂಡ್ ಮಾಡಲು ನಿರಾಕರಿಸಬಹುದು. ತೆರಿಗೆ ಪಾವತಿದಾರರಿಗೆ ತೆರಿಗೆ ಬಾಕಿಯಿರುವ ಬಗ್ಗೆ ನೆನಪಿಸುವ ನೋಟಿಸ್ ಅನ್ನು ತೆರಿಗೆ ಇಲಾಖೆ ನೀಡುತ್ತದೆ. ನೀವು ಸಮಯಕ್ಕೆ ಅನುಗುಣವಾಗಿ ನೋಟಿಸ್ಗೆ ಉತ್ತರಿಸಬೇಕಾಗಿರುತ್ತದೆ. ಅಂತಹ ನೋಟಿಸ್ ಅನ್ನು ನೀವು ಎಂದಾದರೂ ಪಡೆದುಕೊಂಡಿದ್ದೀರಾ ಎಂಬ ಬಗ್ಗೆ ಪರಿಶೀಲಿಸಿ, ನಿಮಗೆ ಬಂದ ನೋಟಿಸ್ಗೆ ನೀವು ನೀಡುವ ಉತ್ತರವನ್ನು ಆಧರಿಸಿ, ಆದಾಯ ತೆರಿಗೆ ಇಲಾಖೆ ರಿಫಂಡ್ ಮಾಡಿಕೊಳ್ಳಲು ಸೂಚನೆ ನೀಡುತ್ತದೆ.
ಬ್ಯಾಂಕ್ ವಿವರಗಳಲ್ಲಿ ದೋಷಗಳು: ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ನೀಡಲಾದ ಬ್ಯಾಂಕ್ ವಿವರಗಳು ತಪ್ಪಾಗಿದ್ದರೆ, ಮರುಪಾವತಿ ಸಾಧ್ಯವಿಲ್ಲ. ಬ್ಯಾಂಕ್ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸುವುದು ಉತ್ತಮ. ರಿಟರ್ನ್‌ಗಳನ್ನು ಸಲ್ಲಿಸಿದ್ದರೂ, ಇ-ವೆರಿಫಿಕೇಷನ್ ಅನ್ನು ಮಾಡದಿದ್ದರೆ, ಮರುಪಾವತಿಯನ್ನು ಸಾಧ್ಯವಾಗುವುದಿಲ್ಲ. ರಿಟರ್ನ್ಸ್ ಸಲ್ಲಿಸಿದ 120 ದಿನಗಳಲ್ಲಿ ಇ-ವೆರಿಫಿಕೇಷನ್ ಅನ್ನು ಪೂರ್ಣಗೊಳಿಸಬೇಕು, ಇಲ್ಲದಿದ್ದರೆ ಅದು ಅಮಾನ್ಯಗೊಳ್ಳುತ್ತದೆ. ಆದಷ್ಟು ಬೇಗ ಇ-ವೆರಿಫಿಕೇಷನ್ ಮಾಡುವುದು ಉತ್ತಮ.
ಹೆಚ್ಚುವರಿ ಮಾಹಿತಿ: ಆದಾಯ ತೆರಿಗೆ ಇಲಾಖೆಯು ನಿಮ್ಮ ರಿಫಂಡ್ಗೆ ಸಂಬಂಧಿಸಿದಂತೆ ಕೆಲವು ಅನುಮಾನಗಳನ್ನು ಹೊಂದಿರಬಹುದು. ಇಲಾಖೆಯು ಕೆಲವು ಸ್ಪಷ್ಟೀಕರಣಗಳನ್ನು ನಿರೀಕ್ಷಿಸಬಹುದು. ಅಲ್ಲಿಯವರೆಗೆ ನಿಮ್ಮ ಮರುಪಾವತಿಯನ್ನು ತಡೆಹಿಡಿಯಬಹುದು. ಆದಾಯ ತೆರಿಗೆ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿ ಮತ್ತು ಯಾವುದೇ ಹೆಚ್ಚುವರಿ ವಿವರಗಳನ್ನು ನೀಡಬೇಕೇ? ಎಂಬ ಬಗ್ಗೆ ತಿಳಿದುಕೊಳ್ಳಿ. ಕೆಲವೊಮ್ಮೆ ನಿಮ್ಮ ಲೆಕ್ಕಾಚಾರಕ್ಕೂ ಆದಾಯ ತೆರಿಗೆ ಇಲಾಖೆಯ ಲೆಕ್ಕಾಚಾರಕ್ಕೂ ವ್ಯತ್ಯಾಸವಿರಬಹುದು. ಅಂತಹ ಸಂದರ್ಭಗಳಲ್ಲಿ, ರಿಫಂಡ್ ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ: ಮೊದಲ ಬಾರಿಗೆ ₹50 ಸಾವಿರ ಕೋಟಿ ತಲುಪಿದ ಟಿಸಿಎಸ್ ಆದಾಯ!