ನವದೆಹಲಿ: ಅಮೆರಿಕದಲ್ಲಿ ಬ್ಯಾಂಕಿಂಗ್ ಬಿಕ್ಕಟ್ಟು ವ್ಯಾಪಿಸುತ್ತಿರುವ ನಡುವೆಯೇ ಇದಕ್ಕೆ ಸಂಬಂಧಿಸಿದ ದೊಡ್ಡ ಸುದ್ದಿ ಹೊರ ಬಂದಿದೆ. ಉತ್ತರ ಕೆರೊಲಿನಾ ಮೂಲದ ಫಸ್ಟ್ ಸಿಟಿಜನ್ಸ್ ಬ್ಯಾಂಕ್ ಮತ್ತು ಟ್ರಸ್ಟ್ ಕಂಪನಿಯು ತೊಂದರೆಗೊಳಗಾದ ಸಿಲಿಕಾನ್ ವ್ಯಾಲಿ ಬ್ಯಾಂಕ್ (SVB) ಖರೀದಿಸಿದೆ. ಅಮೆರಿಕದ ಅಧಿಕಾರಿಗಳು ಈ ಬ್ಯಾಂಕ್ ಅನ್ನು ವಶಪಡಿಸಿಕೊಂಡಿದ್ದರು. ಬಳಿಕ ಒಪ್ಪಂದದ ಮೂಲಕ ಫಸ್ಟ್ ಸಿಟಿಜನ್ಸ್ ಬ್ಯಾಂಕ್ SVB ಯ ಠೇವಣಿ, ಸಾಲ ಮತ್ತು ಶಾಖೆಗಳನ್ನು ಖರೀದಿಸಿದೆ. ಯುಎಸ್ ಫೆಡರಲ್ ಡೆಪಾಸಿಟ್ ಇನ್ಶುರೆನ್ಸ್ ಕಾರ್ಪೊರೇಷನ್ (ಎಫ್ಡಿಐಸಿ) ಈ ಮಾಹಿತಿ ನೀಡಿದೆ.
ಮಾರ್ಚ್ 10 ರ ಹೊತ್ತಿಗೆ SVB ಸುಮಾರು $167 ಶತಕೋಟಿಯ ಒಟ್ಟು ಆಸ್ತಿ ಮತ್ತು ಸರಿಸುಮಾರು $119 ಶತಕೋಟಿಯ ಒಟ್ಟು ಠೇವಣಿ ಹೊಂದಿದೆ ಎಂದು FDIC ಹೇಳಿದೆ. ಈ ವಹಿವಾಟಿನಲ್ಲಿ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ $ 72 ಶತಕೋಟಿ ಆಸ್ತಿಯನ್ನು $ 16.5 ಶತಕೋಟಿ ರಿಯಾಯಿತಿಯಲ್ಲಿ ಖರೀದಿಸಲಾಗಿದೆ. ಸುಮಾರು $90 ಬಿಲಿಯನ್ ಸೆಕ್ಯೂರಿಟಿಗಳು ಮತ್ತು ಇತರ ಸ್ವತ್ತುಗಳು FDIC ನೊಂದಿಗೆ ರಿಸೀವರ್‌ಶಿಪ್‌ನಲ್ಲಿ ಉಳಿದಿವೆ.
ಇಂದಿನಿಂದ 17 ಶಾಖೆಗಳು ಆರಂಭ: ಠೇವಣಿದಾರರನ್ನು ರಕ್ಷಿಸಲು FDIC ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಎಲ್ಲಾ ಠೇವಣಿಗಳನ್ನು ಮತ್ತು ಎಲ್ಲಾ ಸ್ವತ್ತುಗಳನ್ನು ಬ್ರಿಡ್ಜ್ ಬ್ಯಾಂಕ್ ಆಫ್ ಸಿಲಿಕಾನ್ ವ್ಯಾಲಿ (ನ್ಯಾಷನಲ್ ಅಸೋಸಿಯೇಷನ್ - ಪೂರ್ಣ ಸೇವಾ ಬ್ಯಾಂಕ್) ಗೆ ವರ್ಗಾಯಿಸಿತ್ತು. ಇದನ್ನು FDIC ನಿರ್ವಹಿಸುತ್ತದೆ. ಬ್ರಿಡ್ಜ್ ಬ್ಯಾಂಕ್‌ನ 17 ಶಾಖೆಗಳು ಸೋಮವಾರದಂದು ಫಸ್ಟ್-ಸಿಟಿಜನ್ಸ್ ಬ್ಯಾಂಕ್ ಮತ್ತು ಟ್ರಸ್ಟ್ ಕಂಪನಿಯಾಗಿ ತೆರೆಯಲ್ಪಟ್ಟಿವೆ. ಈ ಮೂಲಕ SVB ಠೇವಣಿದಾರರು ಸ್ವಯಂಚಾಲಿತವಾಗಿ ಫಸ್ಟ್-ಸಿಟಿಜನ್ಸ್ ಬ್ಯಾಂಕ್‌ನ ಠೇವಣಿದಾರರಾಗುತ್ತಾರೆ.
ಫಸ್ಟ್ ಸಿಟಿಜನ್ 30ನೇ ಅತಿದೊಡ್ಡ US ಬ್ಯಾಂಕ್: ಫೆಡರಲ್ ರಿಸರ್ವ್ ಪ್ರಕಾರ, 2022 ರ ಡಿಸೆಂಬರ್ 31 ರ ಹೊತ್ತಿಗೆ $109 ಶತಕೋಟಿ ಆಸ್ತಿಯೊಂದಿಗೆ Raleigh, NC ಮೂಲದ ಫಸ್ಟ್ ಸಿಟಿಜನ್ಸ್ 30 ನೇ ಅತಿದೊಡ್ಡ US ಬ್ಯಾಂಕ್ ಆಗಿ ಹೊರಹೊಮ್ಮಿದೆ.
ಸಿಲಿಕಾನ್ ವ್ಯಾಲಿ 16ನೇ ದೊಡ್ಡ ಬ್ಯಾಂಕ್ ಆಗಿತ್ತು: ಮಾರ್ಚ್‌ನಲ್ಲಿ ನಿಯಂತ್ರಕರು ಅಮೆರಿಕದ 16 ನೇ ಅತಿದೊಡ್ಡ ಬ್ಯಾಂಕ್ ಸಿಲಿಕಾನ್ ವ್ಯಾಲಿಯನ್ನು ಮುಚ್ಚಲು ಆದೇಶಿಸಿದರು. ಕ್ಯಾಲಿಫೋರ್ನಿಯಾದ ಹಣಕಾಸು ರಕ್ಷಣೆ ಮತ್ತು ನಾವೀನ್ಯತೆ ಇಲಾಖೆಯು ಈ ಆದೇಶ ಹೊರಡಿಸಿತ್ತು. ಈ ಆದೇಶದ ನಂತರ, ಬ್ಯಾಂಕ್‌ನ ಮೂಲ ಕಂಪನಿಯಾದ ಎಸ್‌ವಿಬಿ ಫೈನಾನ್ಷಿಯಲ್ ಗ್ರೂಪ್‌ನ ಷೇರುಗಳು ಸುಮಾರು 60% ನಷ್ಟು ಕುಸಿತ ಕಂಡವು.
ಸಿಲಿಕಾನ್ ವ್ಯಾಲಿ ಬ್ಯಾಂಕ್ ಕುಸಿತ: ಸಿಲಿಕಾನ್ ವ್ಯಾಲಿ ಬ್ಯಾಂಕ್ 2021 ರಲ್ಲಿ $ 189 ಬಿಲಿಯನ್ ಠೇವಣಿಗಳನ್ನು ಹೊಂದಿತ್ತು. ಕಳೆದ 2 ವರ್ಷಗಳಲ್ಲಿ ಸಿಲಿಕಾನ್ ವ್ಯಾಲಿ ಬ್ಯಾಂಕ್ ತನ್ನ ಗ್ರಾಹಕರ ಹಣದಿಂದ ಹಲವಾರು ಶತಕೋಟಿ ಡಾಲರ್ ಬಾಂಡ್‌ಗಳನ್ನು ಖರೀದಿಸಿತ್ತು. ಆದರೆ ಕಡಿಮೆ ಬಡ್ಡಿದರದ ಕಾರಣ ಈ ಹೂಡಿಕೆಯ ಮೇಲೆ ಸರಿಯಾದ ಲಾಭ ಪಡೆಯಲಿಲ್ಲ.
ಮಾರ್ಚ್ 8 ರಂದು ಎಸ್‌ವಿಬಿ ಬ್ಯಾಂಕ್‌ನ ಹಲವಾರು ಸೆಕ್ಯೂರಿಟಿಗಳನ್ನು ನಷ್ಟಕ್ಕೆ ಮಾರಾಟ ಮಾಡಿದೆ ಎಂದು ವರದಿಯಾಗಿದೆ. ಅಲ್ಲದೆ, ಅದರ ಆಯವ್ಯಯವನ್ನು ಬಲಪಡಿಸಲು, ಇದು $ 2.25 ಶತಕೋಟಿ ಮೌಲ್ಯದ ಹೊಸ ಷೇರುಗಳ ಮಾರಾಟವನ್ನು ಘೋಷಿಸಿತು. ಇದು ಅನೇಕ ದೊಡ್ಡ ಬಂಡವಾಳ ಸಂಸ್ಥೆಗಳಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿತು ಮತ್ತು ಸಂಸ್ಥೆಗಳು ತಮ್ಮ ಹಣವನ್ನು ಬ್ಯಾಂಕ್‌ನಿಂದ ಹಿಂಪಡೆಯಲು ಕಂಪನಿಗಳಿಗೆ ಸಲಹೆ ನೀಡಿತು.
ಇದರ ನಂತರ ಎಸ್‌ಬಿವಿ ಷೇರುಗಳು ಕುಸಿದವು. ಇದರಿಂದಾಗಿ ಇತರ ಬ್ಯಾಂಕ್‌ಗಳ ಷೇರುಗಳು ಸಹ ಭಾರಿ ನಷ್ಟವನ್ನು ಅನುಭವಿಸಿದವು. ಹೂಡಿಕೆದಾರರು ಸಿಗದ ಹಿನ್ನೆಲೆ ಮಾರ್ಚ್ 10ರ ಶುಕ್ರವಾರ ಬೆಳಗಿನ ಜಾವದವರೆಗೆ ಎಸ್‌ವಿಬಿ ಷೇರುಗಳನ್ನು ತಡೆಹಿಡಿಯಲಾಗಿತ್ತು. ಇದಲ್ಲದೆ, ಫಸ್ಟ್ ರಿಪಬ್ಲಿಕ್, ಪ್ಯಾಕ್‌ವೆಸ್ಟ್ ಬ್ಯಾನ್‌ಕಾರ್ಪ್ ಮತ್ತು ಸಿಗ್ನೇಚರ್ ಬ್ಯಾಂಕ್ ಸೇರಿದಂತೆ ಹಲವಾರು ಇತರ ಬ್ಯಾಂಕ್ ಸ್ಟಾಕ್‌ಗಳನ್ನು ಶುಕ್ರವಾರ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು.
ಇದನ್ನೂ ಓದಿ: ಅಮೆರಿಕದ ಬ್ಯಾಂಕಿಂಗ್ ವಲಯದಲ್ಲಿ ಬಿಕ್ಕಟ್ಟು: ಫಸ್ಟ್ ರಿಪಬ್ಲಿಕ್ ಬ್ಯಾಂಕ್ ರಕ್ಷಣೆಗೆ ಧಾವಿಸಿದ 11 ಬ್ಯಾಂಕ್ಗಳು