ಮುಂಬೈ: ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ಅಂತ್ಯಕ್ರಿಯೆ ಮಂಗಳವಾರ ಮುಂಬೈನ ವರ್ಲಿ ಚಿತಾಗಾರದಲ್ಲಿ ಮಧ್ಯಾಹ್ನ 2.30 ಕ್ಕೆ ನೆರವೇರಿತು. ಈ ವೇಳೆ ಉದ್ಯಮಿಗಳಾದ ರತನ್ ಟಾಟಾ, ಅನಿಲ್ ಅಂಬಾನಿ, ಹಿರಿಯ ಸಹೋದರ ಶಾಪೂರ್ ಮಿಸ್ತ್ರಿ, ಅಜಿತ್ ಗುಲಾಬ್‌ಚಂದ್ ಮತ್ತು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಸೇರಿದಂತೆ ಹಲವರು ಇದ್ದರು.
ಟಾಟಾ ಸನ್ಸ್ನ ಖ್ಯಾತ ಉದ್ಯಮಿಯಾಗಿದ್ದ ಸೈರಸ್ ಮಿಸ್ತ್ರಿ ಅವರು ಭಾನುವಾರ ಮುಂಬೈ ಬಳಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು. ಅಹಮದಾಬಾದ್‌ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದಾಗ ಅವರ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿತ್ತು. ಇದರಲ್ಲಿ ಸೈರಸ್ ಮಿಸ್ತ್ರಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಜೊತೆಗೆ ಜಹಾಂಗೀರ್ ದಿನಶಾ ಪಾಂಡೋಲೆ ಕೂಡ ಅಸುನೀಗಿದ್ದರು. ಇನ್ನಿಬ್ಬರು ತೀವ್ರ ಗಾಯಗೊಂಡಿದ್ದಾರೆ.
ಖ್ಯಾತ ಉದ್ಯಮಿ ರತನ್ ಟಾಟಾ ಅವರು ಟಾಟಾ ಸನ್ಸ್ ಗ್ರೂಪ್ನಿಂದ ನಿವೃತ್ತಿ ಘೋಷಿಸಿದ ಬಳಿಕ ಸೈರಸ್ ಮಿಸ್ತ್ರಿ ಅವರು 2012 ರಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. 4 ವರ್ಷಗಳಲ್ಲಿ ಗ್ರೂಪ್ನ ಇನ್ನಿತರ ಉದ್ಯೋಗಿಗಳೊಂದಿಗಿನ ಮನಸ್ತಾಪದಿಂದ ಅವರು 2016 ರಲ್ಲಿ ಅವರು ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಯಬೇಕಾಯಿತು. ಸಂಸ್ಥೆಯ ಈ ಕ್ರಮದ ವಿರುದ್ಧ ಮಿಸ್ತ್ರಿ ಅವರು ಕಾನೂನು ಹೋರಾಟ ಮಾಡಿ ಸೋತಿದ್ದರು.
ವಿದೇಶದಿಂದ ಬಂದ ಮಿಸ್ತ್ರಿ ಕುಟುಂಬಸ್ಥರು: ಸೈರಸ್ ಮಿಸ್ತ್ರಿ ಅವರ ಕುಟುಂಬಸ್ಥರು ವಿದೇಶದಲ್ಲಿ ನೆಲೆಸಿದ್ದು, ಇಂದು ಅವರು ಮುಂಬೈಗೆ ಬಂದಿಳಿದರು. ಮಿಸ್ತ್ರಿ ಅವರ ಅಂತಿಮ ದರ್ಶನ ಪಡೆದ ಬಳಿಕ ಅವರ ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆಗಾಗಿ ವರ್ಲಿಯ ಚಿತಾಗಾರಕ್ಕೆ ತರಲಾಯಿತು. ಈ ವೇಳೆ ವಿವಿಧ ಉದ್ಯಮಿಗಳು ಅಂತಿಮದರ್ಶನ ಪಡೆದರು.
ಓದಿ: ಪಾಲಿಟ್ರೌಮಾದಿಂದ ಸೈರಸ್ ಮಿಸ್ತ್ರಿ ಸಾವು: ಮರಣೋತ್ತರ ಪರೀಕ್ಷಾ ವರದಿ