ನವದೆಹಲಿ: ತೆಲಂಗಾಣದಲ್ಲಿ ಮೊಬೈಲ್ ಗ್ಲಾಸ್ ಕಾರ್ಖಾನೆ ಆರಂಭಿಸಲು ಯೋಜಿಸಿದ್ದ ಅಮೆರಿಕ ಮೂಲದ ಕಾರ್ನಿಂಗ್ ಇಂಕ್ ಈಗ ತನ್ನ ನಿರ್ಧಾರ ಬದಲಾಯಿಸಿದ್ದು, ತೆಲಂಗಾಣದ ಬದಲಿಗೆ ತಮಿಳುನಾಡಲ್ಲಿ ಕಾರ್ಖಾನೆ ಆರಂಭಿಸಲು ನಿರ್ಧರಿಸಿದೆ. ತೆಲಂಗಾಣದಲ್ಲಿ ಸರ್ಕಾರ ಬದಲಾಗಿರುವುದೇ ಕಾರ್ನಿಂಗ್ನ ನಿರ್ಧಾರ ಬದಲಾಗಲು ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. ಈಗ ಆ್ಯಪಲ್ ಕಂಪನಿಯ ಪ್ರಮುಖ ಪೂರೈಕೆದಾರನಾದ ಕಾರ್ನಿಂಗ್, ಭಾರತದ ಎಲೆಕ್ಟ್ರಾನಿಕ್ಸ್ ಕಂಪನಿ ಆಪ್ಟಿಮಸ್ ಇನ್ಫ್ರಾಕಾಮ್ ಸಹಯೋಗದಲ್ಲಿ ತಮಿಳುನಾಡಲ್ಲಿ 1000 ಕೋಟಿ ರೂ. ಬಂಡವಾಳದಲ್ಲಿ ಕಾರ್ಖಾನೆ ಆರಂಭಿಸಲಿದೆ.
ಈ ಹಿಂದೆ, ಆಗಿನ ಕೆ. ಚಂದ್ರಶೇಖರ್ ರಾವ್ ನೇತೃತ್ವದ ರಾಜ್ಯ ಸರ್ಕಾರವು ಕಾರ್ನಿಂಗ್ ಇಂಕ್ ಗೊರಿಲ್ಲಾ ಗ್ಲಾಸ್ ಉತ್ಪಾದನಾ ಘಟಕ ಸ್ಥಾಪಿಸಲು ತೆಲಂಗಾಣವನ್ನು ಆಯ್ಕೆ ಮಾಡಿದೆ ಎಂದು ಸೆಪ್ಟೆಂಬರ್ನಲ್ಲಿ ಘೋಷಿಸಿತ್ತು. ತೆಲಂಗಾಣದಲ್ಲಿ ಉದ್ದೇಶಿತ ಘಟಕವು 800 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸೃಷ್ಟಿಸುವ ನಿರೀಕ್ಷೆಯಿದೆ ಎಂದು ರಾಜ್ಯದ ಮಾಜಿ ಐಟಿ ಮತ್ತು ಕೈಗಾರಿಕಾ ಸಚಿವ ಕೆ.ಟಿ. ರಾಮರಾವ್ ಅವರ ಕಚೇರಿಯ ಹೇಳಿಕೆ ತಿಳಿಸಿತ್ತು.
ಕಾರ್ನಿಂಗ್ ಇಂಕ್ ಈಗ ತಮಿಳುನಾಡಿನ ಶ್ರೀಪೆರಂಬದೂರ್ ಬಳಿಯ ಪಿಳ್ಳೈಪಕ್ಕಂನಲ್ಲಿ 1,000 ಕೋಟಿ ರೂ.ಗಳ ಉತ್ಪಾದನಾ ಘಟಕ ಸ್ಥಾಪಿಸಲು ಯೋಜಿಸುತ್ತಿದೆ ಮತ್ತು 300 ಜನರಿಗೆ ಉದ್ಯೋಗ ನೀಡಲಿದೆ. ವರದಿಯ ಪ್ರಕಾರ ಇತರ ಆ್ಯಪಲ್ ಪೂರೈಕೆದಾರರಾದ ಫಾಕ್ಸ್ಕಾನ್ ಮತ್ತು ಪೆಗಾಟ್ರಾನ್ ಕಾರ್ಖಾನೆಗಳು ಹತ್ತಿರವಾಗುವುದರಿಂದ ಕಾರ್ನಿಂಗ್ ತೆಲಂಗಾಣಕ್ಕಿಂತ ತಮಿಳುನಾಡನ್ನು ಆಯ್ಕೆ ಮಾಡಿದೆ ಎನ್ನಲಾಗಿದೆ.
ಜನವರಿಯಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ (ಜಿಐಎಂ) ಈ ತಿಳಿವಳಿಕಾ ಒಡಂಬಡಿಕೆಗೆ ಅಂಕಿತ ಹಾಕುವ ಸಾಧ್ಯತೆ ಇದೆ. ಅಕ್ಟೋಬರ್ನಲ್ಲಿ ಸ್ವದೇಶಿ ಕಂಪನಿ ಆಪ್ಟಿಮಸ್ ಇನ್ಫ್ರಾಕಾಮ್ ಲಿಮಿಟೆಡ್ ಮತ್ತು ಕಾರ್ನಿಂಗ್ ಮೊದಲ ಹಂತದಲ್ಲಿ ಮೊಬೈಲ್ ಗ್ರಾಹಕ ಎಲೆಕ್ಟ್ರಾನಿಕ್ಸ್ ಉದ್ಯಮಕ್ಕಾಗಿ 30 ಮಿಲಿಯನ್ ಉತ್ತಮ - ಗುಣಮಟ್ಟದ ಫಿನಿಶ್ಡ್ ಕವರ್ ಗ್ಲಾಸ್ ಭಾಗಗಳನ್ನು ತಯಾರಿಸುವುದಾಗಿ ಘೋಷಿಸಿದ್ದವು.
ಭಾರತ್ ಇನ್ನೋವೇಶನ್ ಗ್ಲಾಸ್ (ಬಿಗ್) ಟೆಕ್ನಾಲಜೀಸ್ ಎಂಬ ಜಂಟಿ ಉದ್ಯಮದ ಅಡಿ ಎರಡೂ ಸಂಸ್ಥೆಗಳು ಬಿಡಿಭಾಗಗಳನ್ನು ತಯಾರಿಸಲಿವೆ. ಕವರ್ ಗ್ಲಾಸ್ ಎಲೆಕ್ಟ್ರಾನಿಕ್ ಸಾಧನಗಳಿಗೆ ಬಳಸುವ ಪ್ರಮುಖ ವಸ್ತುವಾಗಿದೆ.
"ಜಾಗತಿಕ ಮತ್ತು ಸ್ಥಳೀಯ ಬ್ರಾಂಡ್ಗಳಿಗೆ ವಿಶ್ವದರ್ಜೆಯ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ನೀಡಲು ನಾವು ಬದ್ಧರಾಗಿದ್ದೇವೆ. ಮುಂದಿನ ಐದು ವರ್ಷಗಳಲ್ಲಿ ಮೊಬೈಲ್ ಗ್ರಾಹಕ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಬಳಸಲು ಸಿದ್ಧಪಡಿಸಿದ ಕವರ್ ಗ್ಲಾಸ್ ಭಾಗಗಳ ಅಗ್ರ ತಯಾರಕರಲ್ಲಿ ಒಬ್ಬರಾಗಿ ಹೊರಹೊಮ್ಮಲು ನಾವು ಉದ್ದೇಶಿಸಿದ್ದೇವೆ" ಎಂದು ಆಪ್ಟಿಮಸ್ ಅಧ್ಯಕ್ಷ ಅಶೋಕ್ ಕುಮಾರ್ ಗುಪ್ತಾ ಹೇಳಿದರು.
ಇದನ್ನೂ ಓದಿ : 2023ರಲ್ಲಿ ಬ್ಲೂ-ಕಾಲರ್ ನೇಮಕಾತಿ ಶೇ 7.4ರಷ್ಟು ಹೆಚ್ಚಳ