ನವದೆಹಲಿ: ತೆರಿಗೆ ವಂಚನೆಯನ್ನು ತಡೆಯಲು ವಿಶಿಷ್ಟ ಗುರುತಿನ ನಂಬರ್(ಆಧಾರ್) ಮತ್ತು ಪ್ಯಾನ್ ನಂಬರ್ ಸಂಯೋಜಿಸುವ ಕಾಲ ಮಿತಿಯನ್ನು ಕೇಂದ್ರ ಸರ್ಕಾರ ವಿಸ್ತರಣೆ ಮಾಡಿದೆ. ಇದೇ 31 ಕ್ಕೆ ಕೊನೆಯಿದ್ದ ದಿನವನ್ನು ಜೂನ್ 30 ರವರೆಗೂ ನೀಡಿದೆ. ಇದರಿಂದ ಜನರು ನಿರಾಳವಾಗಿ ಪ್ಯಾನ್ - ಆಧಾರ್ ನಂಬರ್ ಲಿಂಕ್ ಮಾಡಿಕೊಳ್ಳಬಹುದು. ಹಾಗೊಂದು ವೇಳೆ ಪ್ಯಾನ್ ಮತ್ತು ಆಧಾರ್ ನಂಬರ್ ಲಿಂಕ್ ಆಗದಿದ್ದರೆ, ಅದರ ಪರಿಣಾಮಗಳು ಏನಾಗಬಹುದು. ಹಣಕಾಸಿನ ವ್ಯವಹಾರಕ್ಕೆ ಏನಾದರೂ ಸಮಸ್ಯೆಗಳು ಉಂಟಾಗಲಿವೆಯಾ ಎಂಬುದನ್ನು ಸರ್ಕಾರ ಇದೇ ವೇಳೆ ತಿಳಿಸಿದೆ.
ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಹೊರಡಿಸಿದ ಸುತ್ತೋಲೆಯ ಪ್ರಕಾರ, ಎಲ್ಲಾ ಜನರು ಜೂನ್ 31, 2023 ರೊಳಗೆ ಆಧಾರ್ ಮತ್ತು ಪ್ಯಾನ್ ಕಡ್ಡಾಯವಾಗಿ ಲಿಂಕ್ ಮಾಡಬೇಕು. ಇಲ್ಲವಾದಲ್ಲಿ ಅವರು ಐಟಿ ಕಾಯ್ದೆಯ ಅಡಿಯಲ್ಲಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
1. ಪ್ಯಾನ್ ನಿಷ್ಕ್ರಿಯ: ಆದಾಯ ತೆರಿಗೆ ಇಲಾಖೆಯ ಪ್ರಕಾರ, ಗಡುವಿನ ಒಳಗೆ ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡದಿದ್ದರೆ ಪ್ಯಾನ್ ಸಂಖ್ಯೆ ತನ್ನಿಂತಾನೇ ನಿಷ್ಕ್ರಿಯವಾಗುತ್ತದೆ. ಆದಾಯ ತೆರಿಗೆ ನಿಯಮ 114 AAA ಅನ್ವಯದಂತೆ ಪ್ಯಾನ್ ನಿಷ್ಕ್ರಿಯವಾದರೆ ಅದು ಎಲ್ಲಿಯೂ ಬಳಕೆಗೆ ಬರುವುದಿಲ್ಲ.
2. ದಂಡದ ಹೊರೆ: ನಿಗದಿತ ಗಡುವಿನೊಳಗೆ ಪ್ಯಾನ್- ಆಧಾರ್ ಲಿಂಕ್ ಮಾಡಿದಲ್ಲಿ ವಿಳಂಬ ಶುಲ್ಕವಾದ 1 ಸಾವಿರ ರೂ. ಮಾತ್ರ ಪಾವತಿಸಬೇಕು. ಇಲ್ಲವಾದಲ್ಲಿ 10 ಸಾವಿರ ದಂಡ ಕಟ್ಟಬೇಕಾಗುತ್ತದೆ. ಪ್ಯಾನ್ ನಿಷ್ಕ್ರಿಯವಾಗಿರುವ ಅವಧಿಯವರೆಗಿನ ಮರುಪಾವತಿಗಳಿಗೆ ಬಡ್ಡಿಯೂ ಸಿಗುವುದಿಲ್ಲ. ಯಾವುದೇ ತೆರಿಗೆ ಮರುಪಾವತಿಯೂ ಆಗುವುದಿಲ್ಲ. ಟಿಡಿಎಸ್ ಮತ್ತು ಟಿಸಿಎಸ್ ಅನ್ನು ಅಧಿಕ ಪ್ರಮಾಣದಲ್ಲಿ ಕಡಿತ ಮಾಡಲಾಗುತ್ತದೆ.
3. ಆದಾಯ ತೆರಿಗೆ ರಿಟರ್ನ್‌ಗೆ ಕೊಕ್ಕೆ: ಪ್ಯಾನ್ ಮತ್ತು ಆಧಾರ್ ಸಂಖ್ಯೆಗಳನ್ನು ಲಿಂಕ್ ಮಾಡದಿದ್ದರೆ, ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸುವುದು ಸಹ ಸವಾಲಾಗಬಹುದು. ಐಟಿಆರ್ ಅನ್ನು ಆದಾಯ ತೆರಿಗೆ ಇಲಾಖೆ ತಡೆ ಮತ್ತು ತಿರಸ್ಕರಿಸಬಹುದು. ತೆರಿಗೆ ಮರುಪಾವತಿಯನ್ನು ಪಡೆಯುವುದಕ್ಕೆ ತಡೆ ಬೀಳುವ ಸಂಭವವಿರುತ್ತದೆ.
4. ಸಬ್ಸಿಡಿ ಇತರೆ ಸೇವೆಗಳಿಗೆ ತಡೆ: ಎರಡು ಕಾರ್ಡ್‌ಗಳನ್ನು ಲಿಂಕ್ ಮಾಡದಿದ್ದರೆ, ಸಬ್ಸಿಡಿಗಳನ್ನು ಪಡೆಯುವುದು, ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದು ಮತ್ತು ಬ್ಯಾಂಕ್ ಖಾತೆಯನ್ನು ತೆರೆಯುವುದು ಮುಂತಾದ ಕೆಲವು ಸರ್ಕಾರಿ ಸೇವೆಗಳನ್ನು ಪಡೆಯುವಾಗ ತೊಂದರೆ ಉಂಟಾಗಬಹುದು.
5. ಹೊಸ ಪ್ಯಾನ್ ಕಾರ್ಡ್ ಕಷ್ಟ: ಎರಡೂ ನಂಬರ್ ಸಂಯೋಜನೆ ಮಾಡಿರದಿದ್ದರೆ, ಹೊಸ ಪ್ಯಾನ್ ಕಾರ್ಡ್ ಪಡೆಯುವುದು ಕಷ್ಟ. ಪ್ಯಾನ್ ಕಳೆದುಹೋದರೆ ಅಥವಾ ಹಾನಿಗೊಳಗಾದರೆ ಅದನ್ನು ವಾಪಸ್ ಪಡೆಯಲು ತೊಂದರೆಯಾಗಲಿದೆ. ಹೊಸ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ಸಂಖ್ಯೆಯನ್ನು ನೀಡುವುದು ಸರ್ಕಾರ ಕಡ್ಡಾಯಗೊಳಿಸಿದೆ.
ಪ್ಯಾನ್– ಆಧಾರ್ ಜೋಡಣೆಗೆ ಮೊದಲು ಸರ್ಕಾರ ಯಾವುದೇ ಶುಲ್ಕ ವಿಧಿಸಿರಲಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಜೋಡಣೆ ಕಾರ್ಯಗತವಾಗಲಿಲ್ಲ. ಹೀಗಾಗಿ ಎರಡೂ ಕಾರ್ಡ್ಗಳ ನಂಬರ್ ಸಂಯೋಜನೆಗೆ ನೀಡಿದ್ದ ಗಡುವನ್ನು ಸರ್ಕಾರ ಹಲವು ಬಾರಿ ವಿಸ್ತರಿಸಿತ್ತು. ಇದೇ ಕೊನೆ ಎಂದು ಹೇಳಿ 2022ರ ಮಾರ್ಚ್‌ನಲ್ಲಿ ವಿಸ್ತರಿಸಿದ ಗಡುವು 2023 ರ ಮಾರ್ಚ್ 31ಕ್ಕೆ ಕೊನೆಯಾಗಲಿದೆ ಎಂದಿತ್ತು.
ಆಧಾರ್ ಜೊತೆಗೆ ಜೋಡಣೆಯಾಗದ ಪ್ಯಾನ್‌ಗಳನ್ನು ಇದೇ ಮಾರ್ಚ್ 31ರ ನಂತರ ಬಳಸಲು ಸಾಧ್ಯವಿಲ್ಲ. ಆನಂತರ ವ್ಯಾವಹಾರಿಕ ಮತ್ತು ತೆರಿಗೆ ಲಾಭಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಅಧ್ಯಕ್ಷರು ಈಚೆಗೆ ಹೇಳಿದ್ದರು.
ಇದನ್ನೂ ಓದಿ: ಗುಡ್ ನ್ಯೂಸ್.. ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡುವ ಗಡುವು ವಿಸ್ತರಿಸಿದ ಸರ್ಕಾರ..